ಸೋಲಿನ ಸುಳಿಯಲ್ಲಿ ಆರ್‌ಸಿಬಿ: ಬೆಂಗಳೂರು ವಿರುದ್ಧ ಹೈದರಾಬಾದ್ ಗೆ 5 ವಿಕೆಟ್ ಗೆಲುವು

Update: 2020-10-31 17:29 GMT

ಶಾರ್ಜಾ: ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2020 ಆವೃತ್ತಿಯ 51ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

ಗೆಲುವಿಗೆ 121 ರನ್ ಸುಲಭ ಗುರಿ ಪಡೆದ ಹೈದರಾಬಾದ್ 14.1 ಓವರ್ ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗೆಲುವಿನ ಗುರಿ ತಲುಪಿತು. ವೃದ್ದಿಮಾನ್ ಸಾಹಾ 39 (32 ಎಸೆತ), ಮನೀಶ್ ಪಾಂಡೆ 26 (19 ಎಸೆತ) ಜೇಸನ್ ಹೋಲ್ಡರ್ 26(10 ಎಸೆತ) ರನ್ ಬಾರಿಸಿದರು.

ಬೆಂಗಳೂರು ಪರ ಚಾಹಲ್ 2, ಸುಂದರ್, ಉದಾನ ಹಾಗೂ ಸೈನಿ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ 120 ರನ್ ಗಳಿಸಿತ್ತು. ಆರಂಭಿಕ ಆಟಗಾರ ಜೋಶ್ ಫಿಲಿಪ್ಪೆ 32 (31 ಎಸೆತ) ಎಬಿಡಿ ವಿಲಿಯರ್ಸ್ 24, ವಾಶಿಂಗ್ಟನ್ ಸುಂದರ್ 21 ರನ್ ಬಾರಿಸಿದರು.

ಹೈದರಾಬಾದ್ ಪರ ಸಂದೀಪ್ ಶರ್ಮಾ ಹಾಗೂ ಹೋಲ್ಡರ್ ತಲಾ 2, ನಟರಾಜನ್, ನದೀಮ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಈ ಪಂದ್ಯದ ಮೂಲಕ ಕೊಹ್ಲಿ ಬಳಗ ಸತತ ಮೂರನೇ ಸೋಲು ಕಂಡಿದೆ. 7 ಪಂದ್ಯಗಳಲ್ಲಿ ಗೆದ್ದು 6 ರಲ್ಲಿ ಸೋತಿರುವ ಆರ್‌ಸಿಬಿ ಪ್ಲೇಆಫ್ ತಲುಪಲು ಎದುರು ನೋಡುತ್ತಿದೆ. ಹೈದರಾಬಾದ್ ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. 13 ಪಂದ್ಯಗಲ್ಲಿ 6ರಲ್ಲಿ ಗೆದ್ದು 7 ಪಂದ್ಯಗಳನ್ನು ಸೋತು 4ನೇ ಸ್ಥಾನಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News