‘ಕನಿಷ್ಠ ಸರಕಾರ,ಗರಿಷ್ಠ ಆಡಳಿತ’: ಐಎಎಸ್ ಪ್ರೊಬೇಷನರಿಗಳಿಗೆ ಪ್ರಧಾನಿ ಕಿವಿಮಾತು

Update: 2020-10-31 18:23 GMT

 ಅಹ್ಮದಾಬಾದ್,ಅ.31: ‘ಕನಿಷ್ಠ ಸರಕಾರ ಮತ್ತು ಗರಿಷ್ಠ ಆಡಳಿತ ’ ಮಂತ್ರವನ್ನು ಪಾಲಿಸುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪ್ರೊಬೇಷನರಿ ಐಎಎಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಸರ್ದಾರ್ ವಲ್ಲಭ ಭಾಯಿ ಪಟೇಲರ 145ನೇ ಜಯಂತಿಯ ಅಂಗವಾಗಿ ಗುಜರಾತಿನ ಕೇವಡಿಯಾದಲ್ಲಿ ಅವರಿಗೆ ಗೌರವಗಳನ್ನು ಸಲ್ಲಿಸಿದ ಬಳಿಕ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರೊಬೇಷನರಿ ಐಎಎಸ್‌ಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಭಾರತವು ತನ್ನ ಸ್ವಾತಂತ್ರ್ಯದ 75ನೇ ವರ್ಷವನ್ನು ಪ್ರವೇಶಿಸುತ್ತಿರುವ ನಿರ್ಣಾಯಕ ಕಾಲಘಟ್ಟದಲ್ಲಿ ನೀವು ಸೇವೆಗೆ ಸೇರುತ್ತಿದ್ದೀರಿ. ಸರಕಾರವೊಂದು ಕೇವಲ ನೀತಿಗಳ ಮೇಲೆ ನಡೆಯುವುದಿಲ್ಲ. ನೀತಿಗಳನ್ನು ಜನರಿಗಾಗಿ ರೂಪಿಸಲಾಗುತ್ತದೆ ಮತ್ತು ಅವರು ಅದರಲ್ಲಿ ಭಾಗಿಯಾಗುವ ಅಗತ್ಯವಿದೆ. ಜನರು ಸರಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಫಲಾನುಭವಿಗಳಲ್ಲ,ಅವರು ನಿಜವಾದ ಪ್ರೇರಕ ಶಕ್ತಿಯಾಗಿದ್ದಾರೆ. ಹೀಗಾಗಿ ನಾವು ಸರಕಾರದಿಂದ ಆಡಳಿತದತ್ತ ಸಾಗಬೇಕಿದೆ ’ ಎಂದು ಹೇಳಿದರು.

‘ಆರಾಮದಾಯಕ, ಹೆಸರು ಮತ್ತು ಪ್ರಸಿದ್ಧಿಯನ್ನು ತರುವ ಮಾರ್ಗ ಹಾಗೂ ಹೋರಾಟದ,ಕಷ್ಟಗಳ ಮತ್ತು ಸಮಸ್ಯೆಗಳ ಮಾರ್ಗ, ಹೀಗೆ ಎರಡು ಮಾರ್ಗಗಳು ನಿಮ್ಮ ಮುಂದಿವೆ. ಆದರೆ ನನ್ನ ಅನುಭವದಿಂದ ಹೇಳುವುದಾದರೆ ನೀವು ಸುಲಭ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ನಿಜವಾದ ಕಷ್ಟಗಳನ್ನು ಎದುರಿಸುತ್ತೀರಿ ’ ಎಂದ ಮೋದಿ, ದೇಶವು ಈಗ ಸಾಗುತ್ತಿರುವ ತಿರುವಿನಲ್ಲಿ ನಿಮ್ಮ ಪಾತ್ರವು ಕನಿಷ್ಠ ಸರಕಾರ,ಗರಿಷ್ಠ ಆಡಳಿತವಾಗಿದೆ. ನಿಮ್ಮ ಹಸ್ತಕ್ಷೇಪವನ್ನು ಕಡಿಮೆ ಮಾಡಿಕೊಳ್ಳುವ ಜೊತೆಗೆ ಜನಸಾಮಾನ್ಯರ ಸಬಲೀಕರಣವನ್ನೂ ನೀವು ಖಚಿತಪಡಿಸಬೇಕಾಗುತ್ತದೆ. ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ದೇಶದ ಹಿತಾಸಕ್ತಿಯಲ್ಲಿರಬೇಕು, ದೇಶದ ಏಕತೆ ಮತ್ತು ಸಾರ್ವಭೌಮತೆಯನ್ನು ಬಲಗೊಳಿಸುವ ಉದ್ದೇಶವನ್ನು ಹೊಂದಿರಬೇಕು ಹಾಗೂ ಭಾರತದ ಸಾಂವಿಧಾನಿಕ ಸ್ಫೂರ್ತಿಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News