ಕೋವಿಡ್ ಗೆ ಪಾಸಿಟಿವ್ ಆಗಿದ್ದ ​ತಮಿಳುನಾಡು ಕೃಷಿ ಸಚಿವ ನಿಧನ

Update: 2020-11-01 03:55 GMT

ಚೆನ್ನೈ, ನ.1: ತಮಿಳುನಾಡಿನ ಕೃಷಿ ಸಚಿವ ಆರ್.ದೊರೈಕಣ್ಣು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಭಾನುಮತಿ, ನಾಲ್ವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಅಕ್ಟೋಬರ್ 13ರಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯವರ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸೇಲಂಗೆ ತೆರಳುತ್ತಿದ್ದ ವೇಳೆ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆ ಅವರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು. ಬಳಿಕ ಅವರನ್ನು ಜೀವಬೆಂಬಲ ವ್ಯವಸ್ಥೆಯಲ್ಲಿಡಲಾಗಿತ್ತು.

ಶನಿವಾರ ರಾತ್ರಿ 11:15ಕ್ಕೆ ಸಚಿವರು ಮೃತಪಟ್ಟಿದ್ದಾಗಿ ಆಸ್ಪತ್ರೆ ಪ್ರಕಟಿಸಿದೆ. 1948ರ ಮಾರ್ಚ್ 28ರಂದು ತಂಜಾವೂರಿನಲ್ಲಿ ಜನಿಸಿದ್ದ ದೊರೈಕಣ್ಣು, ಪಾಪನಾಶನಂ ಕ್ಷೇತ್ರದಿಂದ 2006, 2011 ಮತ್ತು 2016ರ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2016ರ ಮೇ ತಿಂಗಳಲ್ಲಿ ಅವರು ಕೃಷಿ ಹಾಗೂ ಪಶು ಸಂಗೋಪನಾ ಖಾತೆ ಸಚಿವರಾಗಿ ನಿಯೋಜಿತರಾಗಿದ್ದರು.

ರಾಜಾ ಸೆರ್ಫೋಜಿ ಸರ್ಕಾರಿ ಕಾಲೇಜಿನಿಂದ ಬಿಎ ಪದವಿ ಪಡೆದಿದ್ದ ಅವರು, ಎಐಎಡಿಎಂಕೆ ಸೇರುವ ಮುನ್ನ ಕೆಲ ವರ್ಷಗಳ ಕಾಲ ಸಹಕಾರ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದ್ದರು. ದೊರೈಕಣ್ಣು ಸಾವಿನೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಎಐಎಡಿಎಂಕೆ ಬಲ 124ರಿಂದ 123ಕ್ಕೆ ಕುಸಿದಿದೆ. ಪ್ರಸಕ್ತ ವಿಧಾನಸಭೆಯ ಅವಧಿ ಕೇವಲ ಏಳು ತಿಂಗಳು ಇರುವ ಹಿನ್ನೆಲೆಯಲ್ಲಿ ಪಾಪನಾಶನಂ ಕ್ಷೇತ್ರಕ್ಕೆ ಉಪಚುನಾವಣೆ ಇರುವುದಿಲ್ಲ. ಸದ್ಯಕ್ಕೆ ವಿಧಾನಸಭೆಯ ತಿರುವೊತ್ರಿಯೂರು, ಗುಡಿಯಟ್ಟಂ, ಚೆಪಾಕ್-ತಿರುವಳ್ಳಿಕೇಣಿ ಕ್ಷೇತ್ರಗಳು ಖಾಲಿ ಇವೆ.

ತಮಿಳುನಾಡಿನ 15ನೇ ವಿಧಾನಸಭೆಯಲ್ಲಿ 2016ರ ಮೇ ತಿಂಗಳಿಂದೀಚೆಗೆ 11 ಶಾಸಕರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News