ಮಾಸ್ಕನ್ನು ಕಡ್ಡಾಯಗೊಳಿಸಿ ಕಾನೂನು ತಂದ ಮೊದಲ ರಾಜ್ಯ ಇದು
Update: 2020-11-02 12:00 IST
ಜೈಪುರ: ಮುಖಗವಸು ಧರಿಸುವುದು ಕಡ್ಡಾಯಗೊಳಿಸಿ ರಾಜ್ಯದಲ್ಲಿ ಇಂದಿನಿಂದಲೇ ಕಾನೂನು ಜಾರಿಗೊಳಿಸಲಿದ್ದೇವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಹೇಳಿದ್ದಾರೆ.
ಕೋವಿಡ್-19 ವಿರುದ್ಧ ಹೋರಾಡಲು ಮುಖಗವಸು ಅತ್ಯಂತ ಮುಖ್ಯವಾಗಿರುವುದರಿಂದ ಮಾಸ್ಕನ್ನು ಕಡ್ಡಾಯಗೊಳಿಸಿದ ಮೊದಲ ರಾಜ್ಯ ನಮ್ಮದು ಎಂದು ಗೆಹ್ಲೋಟ್ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಕೊರೋನ ವೈರಸ್ ವಿರುದ್ಧದ ಸಾರ್ವಜನಿಕ ಆಂದೋಲನದ ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿ ರಾಜ್ಯದಲ್ಲಿ ಇಂದಿನಿಂದಲೇ ಕಾನೂನು ಜಾರಿಗೆ ತರಲಾಗಿದೆ ಎಂದು ಹಿಂದಿಯಲ್ಲಿ ಗೆಹ್ಲೋಟ್ ಟ್ವೀಟಿಸಿದ್ದಾರೆ.
ಕೋವಿಡ್-19 ರೋಗಿಗಳು ಹಾಗೂ ಸಾರ್ವಜನಿಕರಿಗೆ ಆಗುವ ದುಷ್ಪರಿಣಾಮಗಳಿಂದ ರಕ್ಷಿಸಲು ಪಟಾಕಿ ಮಾರಾಟ ಹಾಗೂ ಬಳಕೆಯನ್ನು ನಿರ್ಬಂಧಿಸಲು ನಿರ್ದೇಶನ ನೀಡಿದ ಬೆನ್ನಿಗೇ ರಾಜಸ್ಥಾನ ಮಾಸ್ಕ್ ಕಡ್ಡಾಯಗೊಳಿಸುವ ಕಾನೂನು ಜಾರಿಗೆ ತಂದಿದೆ..