ಅಮೆರಿಕ: ನಾಳೆ ಅಧ್ಯಕ್ಷೀಯ ಚುನಾವಣೆ ಅಧ್ಯಕ್ಷ ಟ್ರಂಪ್‌ಗೆ ಜೋ ಬೈಡನ್ ಎದುರಾಳಿ

Update: 2020-11-02 17:23 GMT

 ವಾಶಿಂಗ್ಟನ್, ನ. 2: ಶ್ವೇತಭವನದಲ್ಲಿ ಇನ್ನೂ ನಾಲ್ಕು ವರ್ಷಗಳ ಕಾಲ ಡೊನಾಲ್ಡ್ ಟ್ರಂಪ್ ಮುಂದುವರಿಯುವರೇ ಅಥವಾ ದೇಶದ ಮಾಜಿ ಉಪಾಧ್ಯಕ್ಷ ಜೋ ಬೈಡನ್ ನೂತನ ಅಧ್ಯಕ್ಷರಾಗುವರೇ ಎನ್ನುವುದನ್ನು ಅಮೆರಿಕದ ಮತದಾರರು ಮಂಗಳವಾರ ನಿರ್ಧರಿಸುತ್ತಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ 74 ವರ್ಷದ ಟ್ರಂಪ್‌ಗೆ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ 77 ವರ್ಷದ ಜೋ ಬೈಡನ್ ಸವಾಲೊಡ್ಡಿದ್ದಾರೆ.

1970ರ ದಶಕದಿಂದಲೂ ಅಮೆರಿಕದ ರಾಜಕೀಯದಲ್ಲಿರುವ ಬೈಡನ್, ಬರಾಕ್ ಒಬಾಮ ಅಧಿಕಾರಾವಧಿಯಲ್ಲಿ ಉಪಾಧ್ಯಕ್ಷರಾದ ಬಳಿಕ ಖ್ಯಾತಿ ಪಡೆದಿದ್ದಾರೆ.

ಇದು ಅಮೆರಿಕದ 59ನೇ ಅಧ್ಯಕ್ಷೀಯ ಚುನಾವಣೆಯಾಗಿದ್ದು, ಮತದಾರರು ಅಧ್ಯಕ್ಷೀಯ ಅಭ್ಯರ್ಥಿಗಳ ಪ್ರತಿನಿಧಿಗಳನ್ನು ಆರಿಸುತ್ತಾರೆ. ಈ ಪ್ರತಿನಿಧಿಗಳು ಡಿಸೆಂಬರ್ 14ರಂದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸುತ್ತಾರೆ.

ಕೋವಿಡ್-19 ಸಾಂಕ್ರಾಮಿಕವು ಈ ಬಾರಿಯ ಅಮೆರಿಕ ಚುನಾವಣೆಯ ಪ್ರಮುಖ ವಿಷಯವಾಗಿದೆ. ಅಮೆರಿಕವು ಜಗತ್ತಿನಲ್ಲೇ ಕೊರೋನ ವೈರಸ್‌ನಿಂದಾಗಿ ಅತ್ಯಂತ ಹೆಚ್ಚು ಹಾನಿ ಅನುಭವಿಸಿದ ದೇಶವಾಗಿದೆ. ಅಲ್ಲಿ ಮಾರಕ ಸಾಂಕ್ರಾಮಿಕಕ್ಕೆ 2,30,000ಕ್ಕಿಂತಲೂ ಹೆಚ್ಚಿನ ಜನರು ಸಾವಿಗೀಡಾಗಿದ್ದಾರೆ.

ಜಾರ್ಜ್ ಫ್ಲಾಯ್ಡ್ ಸೇರಿದಂತೆ ಹಲವು ಆಫ್ರಿಕನ್ ಅಮೆರಿಕನ್ನರು ಪೊಲೀಸರ ಗುಂಡಿಗೆ ಬಲಿಯಾಗಿರುವುದು ಕೂಡ ಈ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ನೂತನ ಅಧ್ಯಕ್ಷರು 2021 ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈವರೆಗೆ ನಡೆದ ಹಲವು ಸಮೀಕ್ಷೆಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಎದುರಾಳಿಗಿಂತ ಮುಂದಿದ್ದಾರೆ.

ಟೆಕ್ಸಾಸ್, ಆ್ಯರಿರೆನ, ನಾರ್ತ್ ಕ್ಯಾರಲೈನ್ ಮತ್ತು ಫ್ಲೋರಿಡ ಸೇರಿದಂತೆ 16 ರಾಜ್ಯಗಳು ಫಲಿತಾಂಶದಲ್ಲಿ ಮಹತ್ವದ ಪಾತ್ರ ವಹಿಸಲಿವೆ.

ಒಳಗೆ ಬಾಕ್ಸ್

ಈಗಾಗಲೇ 9.2 ಕೋಟಿ ಮತ ಚಲಾವಣೆ!

ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅಮೆರಿಕದ ಅರ್ಧಕ್ಕೂ ಹೆಚ್ಚು ಸಂಖ್ಯೆಯ ಮತದಾರರು ಈಗಾಗಲೇ ಅಂಚೆ ಮೂಲಕ ಮತದಾನ ಮಾಡಿದ್ದಾರೆ. ಅವೆುರಿಕದ ಇತಿಹಾಸದಲ್ಲೇ ಇದು ದಾಖಲೆಯಾಗಿದೆ.

ದೇಶದ ಸುಮಾರು 15 ಕೋಟಿ ಅರ್ಹ ಮತದಾರರ ಪೈಕಿ ಈಗಾಗಲೇ 9.2 ಕೋಟಿಗೂ ಅಧಿಕ ಮತದಾರರು ಅವೆುರಿಕದಲ್ಲಿ ತಮ್ಮ ಮತಗಳನ್ನು ಅಂಚೆ ಮೂಲಕ ಚಲಾಯಿಸಿದ್ದಾರೆ ಎನ್ನಲಾಗಿದೆ.

ಅಂಚೆ ಮೂಲಕ ಮತ ಚಲಾಯಿಸಿದವರಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್‌ರ ಬೆಂಬಲಿಗರೇ ಅಧಿಕ ಎಂದು ಹೇಳಲಾಗಿದೆ. ಹಾಗಾಗಿ, ಈಗ ಬೈಡನ್ ಮುನ್ನಡೆಯಲ್ಲಿದ್ದಾರೆ. ವಾಸ್ತವಿಕ ಮತದಾನದ ದಿನವಾದ ಮಂಗಳವಾರ ಮತ ಚಲಾಯಿಸುವವರ ಪೈಕಿ ಹೆಚ್ಚಿನವರು ಟ್ರಂಪ್ ಬೆಂಬಲಿಗರು ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News