ಅಧ್ಯಾಪಕರ ವಜಾಕ್ಕೆ ಆಗ್ರಹಿಸಿದ್ದ ಎಬಿವಿಪಿಗೆ ತಿರುಗೇಟು ನೀಡಿದ ಗೋವಾ ಕಾಲೇಜು ಹೇಳಿದ್ದೇನು?

Update: 2020-11-03 05:02 GMT

ಪಣಜಿ : ಇಲ್ಲಿನ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರ ವಿರುದ್ಧದ ಎಬಿವಿಪಿ ನೀಡಿದ್ದ ದೂರಿನ ಮೇಲೆ ತನಿಖೆ ನಡೆಸಿದ ನಂತರ ಕಾಲೇಜಿನ ಆಡಳಿತ ಮಂಡಳಿಯು ಸಂಘಟನೆಗೆ ಲಿಖಿತ ಉತ್ತರ ನೀಡಿದ್ದು,  "ಅವರಿಗೆ (ಎಬಿವಿಪಿ) ಇಂತಹ ಆಕ್ಷೇಪಣೆಗಳನ್ನೆತ್ತಲು ಯಾವುದೇ ಹಕ್ಕಿಲ್ಲ ಹಾಗೂ ಆ ನಿರ್ದಿಷ್ಟ ಉಪನ್ಯಾಸಕರ ವಿರುದ್ಧ ಅಮಾನತು ಆದೇಶ ಹೊರಡಿಸಲಾಗುವುದಿಲ್ಲ,'' ಎಂದು ಹೇಳಿದೆ.

ಕಾಲೇಜಿನ ಆಡಳಿತ ಮಂಡಳಿಯ ಪ್ರತಿಕ್ರಿಯೆಯನ್ನು ಎಬಿವಿಪಿಗೆ ಶನಿವಾರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ರವಾನಿಸಲಾಗಿದೆ ಎಂದು ವಿ ಎಂ ಸಲ್ಗಾವೊಕರ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಶಬೀರ್ ಅಲಿ ಹೇಳಿದ್ದಾರೆ.

"ಇದು ಕಾನೂನು ಕಾಲೇಜು. ನಿಯಮಗಳ ಪಾಲನೆಯ ಜವಾಬ್ದಾರಿ ನಮಗಿದೆ.  ಕಾನೂನಾತ್ಮಕವಾಗಿಯೂ ಅವರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ,'' ಎಂದಿದ್ದಾರೆ.

ಕಳೆದ ತಿಂಗಳು ಎಬಿವಿಪಿ ಸಂಘಟನೆ  ಕಾಲೇಜಿನ ಉಪನ್ಯಾಸಕಿ ಪ್ರೊ ಶಿಲ್ಪಾ ಸಿಂಗ್ ವಿರುದ್ಧ ದೂರು ನೀಡಿ "ಆಕೆ ಒಂದು ನಿರ್ದಿಷ್ಟ ಧರ್ಮ, ಸಮುದಾಯ ಹಾಗೂ ಜನರ ಗುಂಪಿನ ವಿರುದ್ಧ ದ್ವೇಷದ ಭಾವನೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ,'' ಎಂದು ಆರೋಪಿಸಿತ್ತು. ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಶಿಲ್ಪಾ ಅವರನ್ನು ಅಮಾನತುಗೊಳಿಸಬೇಕೆಂಬ ಬೇಡಿಕೆಯನ್ನೂ ಎಬಿವಿಪಿ ಮುಂದಿಟ್ಟಿತ್ತು.

ಕಾಲೇಜಿನ ತ್ರಿಸದಸ್ಯ ಆಂತರಿಕ ಸಮಿತಿ ಈ ದೂರಿನ ಕುರಿತು ವಿಚಾರಣೆ ನಡೆಸಿತ್ತಲ್ಲದೆ ಉಪನ್ಯಾಸಕಿಯ ವಿರುದ್ಧ  ಮಾಡಿರುವ ಆಪಾದನೆಗೆ ಯಾವುದೇ ಸಾಕ್ಷ್ಯವನ್ನು ದೂರುದಾರರು ನೀಡಿಲ್ಲ ಹಾಗೂ ಯಾವುದೇ ಸಾಕ್ಷ್ಯ ಪ್ರಸ್ತುತ ಪಡಿಸದೆ ಮಾಡಿರುವ ಆಪಾದನೆಗಳ ಆಧಾರದಲ್ಲಿ  ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ,'' ಎಂದು ಹೇಳಿದೆ. ಪ್ರೊ ಶಿಲ್ಪಾ ಸಿಂಗ್ ಅವರೊಬ್ಬ ಅತ್ಯುತ್ತಮ ಉಪನ್ಯಾಸಕಿ ಹಾಗೂ ವಿದ್ಯಾರ್ಥಿಗಳು ಅವರು ಪಾಠ ಮಾಡುವ ವಿಧಾನದಿಂದ ಖುಷಿಯಾಗಿದ್ದಾರೆ ಎಂದೂ ಪ್ರಾಂಶುಪಾಲರು ಹೇಳಿದ್ದಾರೆ.

ಎಬಿವಿಪಿ ದೂರು ಅರ್ಜಿಗೆ ಅದರ ಕೊಂಕಣ ಘಟಕದ ಜಂಟಿ ಕಾರ್ಯದರ್ಶಿ ಪ್ರಭಾ ನಾಯ್ಕ್ ಸಹಿ ಹಾಕಿದ್ದು ಆಕೆ ಕಾಲೇಜಿನ ವಿದ್ಯಾರ್ಥಿನಿಯಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News