×
Ad

ಕೇರಳದ ಕ್ಯಾಲಿಕಟ್ ನಲ್ಲಿ ರಾಜ್ಯದ ಮೊದಲ ಟೆಲಿ-ಐಸಿಯು ಸ್ಥಾಪನೆ

Update: 2020-11-03 12:49 IST

ಕ್ಯಾಲಿಕಟ್ : ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಮೊದಲ ಟೆಲಿ-ಐಸಿಯು ಇಲ್ಲಿನ ಸರಕಾರಿ ಬೀಚ್ ಆಸ್ಪತ್ರೆಯಲ್ಲಿ ಪ್ರಾರಂಭವಾಗಿದೆ. ಟೆಲಿ ಐಸಿಯು ಎಂದರೆ ತೀವ್ರ ನಿಗಾ ವಿಭಾಗದಲ್ಲಿ ರೋಗಿಯ ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿಗೆ ತಜ್ಞ ವೈದ್ಯರು ಎಲ್ಲಿಂದ ಬೇಕಾದರೂ ಸಮಾಲೋಚನೆ ಮಾಡಿ ಚಿಕಿತ್ಸೆ ಮುಂದುವರಿಸುವ ವ್ಯವಸ್ಥೆ. ತೀವ್ರ ನಿಗಾ ತಜ್ಞರ ಕೊರತೆಯಿಂದ ರೋಗಿಗಳಿಗೆ ಚಿಕಿತ್ಸೆ ತಡವಾಗದಂತೆ ನೋಡಿಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಿದೆ. 

ಕ್ಯಾಲಿಕಟ್ ಮೈತ್ರಾ ಆಸ್ಪತ್ರೆಯಲ್ಲಿರುವ ನಿಯಂತ್ರಣ ಕೇಂದ್ರದ ಮೂಲಕ  ತೀವ್ರ ನಿಗಾ ಘಟಕದ ತಜ್ಞ ವೈದ್ಯರು ದಿನದ 24 ಗಂಟೆಯೂ  ಸರಕಾರಿ ಬೀಚ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಟೆಲಿ ಐಸಿಯು ನಲ್ಲಿರುವ ರೋಗಿಗಳ ಮೇಲ್ವಿಚಾರಣೆ ನಡೆಸಿ ಚಿಕಿತ್ಸೆ ನೀಡುವ ನಿರೀಕ್ಷೆಯಿದೆ.

ರವಿವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಈ ಸೌಲಭ್ಯವನ್ನು ಉದ್ಘಾಟಿಸಿದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಸರಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಐಸಿಯು ಕೊರತೆಯನ್ನು ನೀಗಿಸಲು ಆರೋಗ್ಯ ಇಲಾಖೆಯು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಟೆಲಿ-ಐಸಿಯು ಸೌಲಭ್ಯವನ್ನು ಸ್ಥಾಪಿಸಲು ಯೋಚಿಸುತ್ತಿದೆ ಎಂದು ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಎನ್ಎಚ್ಎಂ ನಿಧಿಯ ಸಹಾಯದಿಂದ ಬೀಚ್ ಆಸ್ಪತ್ರೆಯಲ್ಲಿ 22 ಹಾಸಿಗೆಗಳೊಂದಿಗೆ ಹೊಸ ಐಸಿಯು ಸ್ಥಾಪಿಸಿತ್ತು. ಮೈತ್ರಾ ಆಸ್ಪತ್ರೆ  ಅಧಿಕಾರಿಗಳು ಜನರಲ್ ಆಸ್ಪತ್ರೆಯ ಐಸಿಯುನಲ್ಲಿ ಹೈ-ಡೆಫಿನಿಷನ್ ಕ್ಯಾಮರಾಗಳು ಹಾಗೂ ಸಾಫ್ಟ್ ವೇರ್ಗಳನ್ನು ಸ್ಥಾಪಿಸಿದ್ದಾರೆ.ರೋಗಿಗಳ ಮೇಲೆ 24 ಗಂಟೆಗಳ ಕಾಲ ನಿಗಾ ಇಡಲು ಕ್ಯಾಮರಾವನ್ನು ಮೈತ್ರಾ ಆಸ್ಪತ್ರೆಯ ನಿಯಂತ್ರಣ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗಿದೆ.

ಟೆಲಿ-ಐಸಿಯು ತಜ್ಞ ವೈದ್ಯರ ಕೊರತೆಯನ್ನು ನೀಗಿಸುವುದಲ್ಲದೆ, ಸೋಂಕಿನ ನಿಯಂತ್ರಣ, ಉತ್ತಮ ಆರೋಗ್ಯ ಫಲಿತಾಂಶವನ್ನು ಖಚಿತಪಡಿಸಲು ಔಷಧ ದೋಷಗಳನ್ನು ಕಡಿಮೆ ಮಾಡಲು ಹಲವಾರು ಆರೈಕೆ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆಯಿದೆ.

ವೈದ್ಯರಿಗೆ ಡಿಜಿಟಲ್ ಪರಿಹಾರದ ಸಾಧನ ನೀಡುವ ಮೂಲಕ ಆರೋಗ್ಯ ಸೇವೆಯ ಸವಾಲುಗಳನ್ನು ಪರಿಹರಿಸಲು, ತಾಂತ್ರಿಕ ಸಂಶೋಧನೆಯ ಪೂರ್ಣ ಲಾಭ ಪಡೆಯಲು  ಇದು ಸರಿಯಾದ ಸಮಯ. ಆರೋಗ್ಯ ಸಚಿವಾಲಯದೊಂದಿಗೆ ಸಹಭಾಗಿತ್ವದಲ್ಲಿರುವುದಕ್ಕೆ ಸಂತೋಷವಾಗಿದೆ ಎಂದು ಮೈತ್ರಾ ಆಸ್ಪತ್ರೆಯ ಅಧ್ಯಕ್ಷ ಫೈಝಲ್ ಕೊಟ್ಟಿಕೊಲ್ಲನ್ ಹೇಳಿದ್ದಾರೆ. ಈ ಹೊಸ ಕೇಂದ್ರವನ್ನು ನಡೆಸಲು ಫೈಝಲ್ ಅವರ ಫೈಝಲ್ ಅಂಡ್ ಶಬಾನಾ ಫೌಂಡೇಶನ್ ಆರ್ಥಿಕ ಸಹಕಾರ ನೀಡಲಿದೆ. 

ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಐಸಿಯು ಹಾಸಿಗೆಗಳಿವೆ. ಆದರೆ ದೇಶದಲ್ಲಿ 5000ಕ್ಕಿಂತಲೂ ಕಡಿಮೆ ಐಸಿಯು ತಜ್ಞರಿದ್ದಾರೆ . ಇಲ್ಲಿ ಅಂತರವು ದೊಡ್ಡದಾಗಿದೆ. ಇದಕ್ಕೆ ಪರಿಹಾರ ಲಭಿಸಿಲ್ಲ. ತಂತ್ರಜ್ಞಾನದ ಬಳಕೆಯ ಮೂಲಕ ನಾವು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಲು ಸಾಧ್ಯ ಎಂದು ಮೈತ್ರಾ ಆಸ್ಪತ್ರೆಯ ನಿರ್ದೇಶಕ ಡಾ. ಅಲಿ ಫೈಝಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News