×
Ad

ಅಂಬೇಡ್ಕರ್ ಮನುಸ್ಮೃತಿ ಸುಟ್ಟ ಬಗ್ಗೆ ಪ್ರಶ್ನೆ: ಬಿಗ್ ಬಿ ಮೇಲೆರಗಿದ ಕೇಸರಿ ಟ್ರೋಲ್ ಗಳಿಗೆ ತಿರುಗೇಟು ನೀಡಿದ ಜನರು

Update: 2020-11-03 13:05 IST

ಮುಂಬೈ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ತಮ್ಮ ಜನಪ್ರಿಯ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಮನುಸ್ಮೃತಿಯ ಕುರಿತಂತೆ ಸ್ಪರ್ಧಾಳುವೊಬ್ಬರಿಗೆ ಕೇಳಿದ ಪ್ರಶ್ನೆಯಿಂದಾಗಿ ಅವರ ಮೇಲೆರಗಿದ ಕೇಸರಿ ಟ್ರೋಲ್‍ಗಳಿಗೆ ಹಲವಾರು ಟ್ವಿಟ್ಟರಿಗರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಅಮಿತಾಭ್ ಕೇಳಿದ ಪ್ರಶ್ನೆಯಿಂದಾಗಿ ಅವರ ವಿರುದ್ಧ ಲಕ್ನೋದಲ್ಲಿ ದೂರೊಂದು ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ.

ತಮ್ಮ ವಿಶೇಷ ಅತಿಥಿ, ಸಾಮಾಜಿಕ ಹೋರಾಟಗಾರ ಬೆಝ್ವಾಡ ವಿಲ್ಸನ್ ಅವರಿಗೆ ಬಿಗ್ ಬಿ ಮನುಸ್ಮೃತಿ ಕುರಿತಾಗಿ ಕೇಳಿದ ರೂ. 6.40 ಲಕ್ಷ ಮೌಲ್ಯ ಬಹುಮಾನವಿದ್ದ ಪ್ರಶ್ನೆ ಹೀಗಿತ್ತು. "ಡಿಸೆಂಬರ್ 25, 1927ರಲ್ಲಿ ಬಿ. ಆರ್. ಅಂಬೇಡ್ಕರ್ ಮತ್ತವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟರು?'', ಇದಕ್ಕಿದ್ದ ಉತ್ತರದ ಆಯ್ಕೆಗಳು ವಿಷ್ಣು ಪುರಾಣ, ಭಗವದ್ಗೀತೆ, ಖಗ್ವೇದ ಹಾಗೂ ಮನುಸ್ಮೃತಿ ಆಗಿತ್ತು.

ನಟ ಅನೂಪ್ ಸೋನಿ ಜತೆಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ವಿಲ್ಸನ್ ಸರಿಯಾದ ಉತ್ತರವನ್ನೇ ನೀಡಿದರಲ್ಲದೆ "ನಾವು ಇಂದು ಅವರಿಂದಾಗಿ ಇದ್ದೇವೆ. ನಾವು ಮಾತ್ರವಲ್ಲ ಇಡೀ ಜಗತ್ತು, ಅವರು ನಮಗೆ ಭ್ರಾತೃತ್ವ ಮತ್ತು ಸಮಾನತೆಯನ್ನು ಕಲಿಸಿದ್ದಾರೆ,'' ಎಂದರಲ್ಲದೆ ಅಂತಹುದೇ ಕೃತ್ಯ ಈಗ ಮಾಡಿದರೆ ಬಂಧನಕ್ಕೊಳಗಾಗಬೇಕಾದೀತು ಎಂದರು.

ಬಿಗ್ ಬಿ ಕೇಳಿದ ಈ ಪ್ರಶ್ನೆಯಿಂದ ಕೇಸರಿ ಪಡೆಗಳಿಂದ ಅವರು ಟ್ರೋಲ್‍ಗೊಳಗಾಗಿದ್ದು, ಹಲವಾರು ತಟಸ್ಥ ನಿಲುವು ಹೊಂದಿದವರಿಂದ ಬಚ್ಚನ್ ಬೆಂಬಲವನ್ನೂ ಪಡೆದರು.

"ಮನುಸ್ಮೃತಿ  ಜಾತಿ ಮತ್ತು ಲಿಂಗಾಧರಿತ ತಾರತಮ್ಯ ಮತ್ತು ಹಿಂಸೆಯನ್ನು ಪ್ರಚೋದಿಸುತ್ತದೆಯೆಂದು ಅದನ್ನು ಖಂಡಿಸಿ ಅಂಬೇಡ್ಕರ್ ಅವರು 92 ವರ್ಷಗಳ ಹಿಂದೆ ಅದನ್ನು ಸಾರ್ವಜನಿಕವಾಗಿ ಸುಟ್ಟರು. ಇಂದು ಈ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಅವರು ಕೆಬಿಸಿ ಹಾಗೂ ಬಚ್ಚನ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.''  ಎಂದು ಒಬ್ಬರು ಪ್ರತಿಕ್ರಿಯಿಸಿದರೆ ಇನ್ನೊಬ್ಬರು ಈ ಕುರಿತು ಪ್ರತಿಕ್ರಿಯಿಸಿ "ಇಂತಹ ಒಂದು ಪ್ರಶ್ನೆಯಿಂದಾಗಿ ಈ ಕಾರ್ಯಕ್ರಮ ಇಂದು ಧರ್ಮವನ್ನು ಅವಮಾನಿಸುತ್ತದೆ ಎಂದು ಅವರು ಹೇಳುತ್ತಿದ್ದಾರೆ.'' ಎಂದು ಬರೆದಿದ್ದಾರೆ.

"ಫ್ರಾನ್ಸ್ ಘಟನೆ ಸಂದರ್ಭ ವಾಕ್ ಸ್ವಾತಂತ್ರ್ಯ ಎಂದು ಬೊಬ್ಬೆ ಹೊಡೆಯುತ್ತಿದ್ದ ಭಕ್ತ ಪಡೆ ಈಗ ಮನುಸ್ಮೃತಿ ಕುರಿತ ಪ್ರಶ್ನೆಗೆ ಕೆಬಿಸಿ ವಿರುದ್ಧದ ಎಫ್‍ಐಆರ್ ಅನ್ನು ಬೆಂಬಲಿಸುತ್ತಿದೆ,'' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News