ನಿರುದ್ಯೋಗ,ವಲಸೆ ಕಾರ್ಮಿಕರ ಬಿಕ್ಕಟ್ಟು ಕುರಿತು ಮೋದಿ, ನಿತೀಶ್ ವಿರುದ್ಧ ರಾಹುಲ್ ಟೀಕಾಪ್ರಹಾರ

Update: 2020-11-04 15:13 GMT

ಮಾಧೇಪುರ(ಬಿಹಾರ),ನ.4: ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಬುಧವಾರ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಕೊರೋನ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗ ಅವರಿಂದ ಮತಗಳನ್ನು ಕೋರುತ್ತಿದ್ದಾರೆ ಎಂದು ಟೀಕಿಸಿದರು. ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ ಅವರ ಪುತ್ರಿ ಸುಭಾಷಿಣಿ ಯಾದವ್ ಸ್ಪರ್ಧಿಸಿರುವ ಬಿಹಾರಿಗಂಜ್ ‌ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಉದ್ಯೋಗ ಸೃಷ್ಟಿ ಕುರಿತಂತೆ ಮೋದಿ ಮತ್ತು ನಿತೀಶ್ ರನ್ನು ತರಾಟೆಗೆತ್ತಿಕೊಂಡರು. ಯುವಜನರಿಗಾಗಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಬಿಹಾರವನ್ನು ಬದಲಾಯಿಸುವ ಭರವಸೆ ನೀಡಿದ್ದ ನಿತೀಶ ಅದನ್ನು ಈಡೇರಿಸುವಲ್ಲಿ ವಿಫಲಗೊಂಡಿದ್ದಾರೆ. ಬಹಿರಂಗ ಸಭೆಗಳಲ್ಲಿ ಈ ಬಗ್ಗೆ ಪ್ರಶ್ನಿಸುತ್ತಿರುವ ಯುವಜನರಿಗೆ ನಿತೀಶ್ ಬೆದರಿಕೆಯೊಡ್ಡುತ್ತಿದ್ದಾರೆ ಎಂದರು.

ಗೋವಿನ ಜೋಳ ಮತ್ತು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ವಿಷಯವನ್ನು ಪ್ರಸ್ತಾಪಿಸಿದ ಅವರು,ರೈತರಿಗೆ ಸಿಗಬೇಕಾದ ಹಣವು ವಾಸ್ತವದಲ್ಲಿ ಮಧ್ಯವರ್ತಿಗಳಿಗೆ ಸೇರುತ್ತಿದೆ ಎಂದರು.

ಮೋದಿ ಮತ್ತು ನಿತೀಶ್ ಕೊರೋನ ವೈರಸ್ ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಯಾವುದೇ ಸಹಾಯವನ್ನು ಮಾಡಿರಲಿಲ್ಲ,ಬದಲು ಅವರ ಮೇಲೆ ಲಾಠಿಪ್ರಹಾರ ಮಾಡಿಸಿದ್ದರು. ಈಗ ಇದೇ ಜನರ ಮತಗಳನ್ನು ಕೋರುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್,ಪ್ರಧಾನಿಯವರ ಹೃದಯದಲ್ಲಿ ರೈತರು ಮತ್ತು ಕಾರ್ಮಿಕರಿಗೆ ಸ್ವಲ್ಪವಾದರೂ ಸ್ಥಳವಿದ್ದಿದ್ದರೆ ಅವರು ಪ್ರಾಣತ್ಯಾಗ ಮಾಡುತ್ತಿದ್ದರೇ ಹೊರತು ಲಾಕ್‌ಡೌನ್ ಸಂದರ್ಭದಲ್ಲಿ ಮಾಡಿದ್ದ ಕೆಲಸಗಳನ್ನು ಮಾಡುತ್ತಿರಲಿಲ್ಲ. ಇಡೀ ಬಿಹಾರಕ್ಕೆ ಇದು ಗೊತ್ತಿದೆ ಎಂದರು.

ಇತ್ತೀಚಿಗೆ ಅಂಗೀಕರಿಸಿರುವ ಮೂರು ಕೃಷಿ ಕಾನೂನುಗಳ ಮೂಲಕ ಮೋದಿಯವರು ಅದಾನಿ ಮತ್ತು ಅಂಬಾನಿಯಂತಹ ನೂತನ ಮಧ್ಯವರ್ತಿಗಳ ಮಾರ್ಗವನ್ನು ಸುಗಮಗೊಳಿಸಿದ್ದಾರೆ. ಇಲ್ಲಿ ಬೆಳೆದ ಧಾನ್ಯಗಳು ದೊಡ್ಡ ಗೋದಾಮುಗಳನ್ನು ಸೇರುತ್ತಿವೆ ಮತ್ತು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ನೂತನ ಕೃಷಿ ಕಾನೂನುಗಳಿಂದಾಗಿ ತರಕಾರಿಗಳು ಮತ್ತು ಇತರ ಆಹಾರ ಸಾಮಗ್ರಿಗಳ ಬೆಲೆಗಳು ಏರುತ್ತಿವೆ ಎಂದು ರಾಹುಲ್ ನುಡಿದರು.

ಶರದ್ ಯಾದವ್ ರನ್ನು ಹೊಗಳಿದ ರಾಹುಲ್, ಅವರು ತನಗೆ ಬಹಳಷ್ಟನ್ನು ಕಲಿಸಿದ್ದಾರೆ, ಒಂದು ರೀತಿಯಲ್ಲಿ ಅವರು ತನಗೆ ಗುರುವಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News