ಪತ್ರಕರ್ತರು ಜೈಲುವಾಸ ಅನುಭವಿಸಿದಾಗ ಬಿಜೆಪಿಗೆ ಪತ್ರಿಕಾ ಸ್ವಾತಂತ್ರ್ಯ ನೆನಪಾಗಲಿಲ್ಲವೇ? : ಕಾಂಗ್ರೆಸ್

Update: 2020-11-04 15:36 GMT
ಸುಪ್ರಿಯಾ ಶ್ರೀನೆತ್

ಮುಂಬೈ, ನ.4: ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನದ ಬಗ್ಗೆ ಬಿಜೆಪಿ ಮುಖಂಡರ ಟೀಕೆಗೆ ಇದಿರೇಟು ನೀಡಿರುವ ಕಾಂಗ್ರೆಸ್, ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಬಿಜೆಪಿ ಮಾಡುತ್ತಿರುವ ಆಯ್ದ ವಿರೋಧ ಅವಮಾನಕರವಾಗಿದ್ದು, ಗೋಸ್ವಾಮಿ ಪ್ರಕರಣದಲ್ಲಿ ಕಾನೂನು ತನ್ನದೇ ಆದ ಹಾದಿಯಲ್ಲಿ ಸಾಗುತ್ತದೆ ಎಂದು ಹೇಳಿದೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೆತ್, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಗರಣಗಳನ್ನು ಬೆಳಕಿಗೆ ತಂದ ಹಲವು ಪತ್ರಕರ್ತರು ಅನ್ಯಾಯವಾಗಿ ಜೈಲುವಾಸ ಅನುಭವಿಸಿದ್ದರು. ಆದರೆ ಆಗ ಬಿಜೆಪಿಗೆ ಪತ್ರಿಕಾ ಸ್ವಾತಂತ್ರ್ಯದ ನೆನಪಾಗಿರಲಿಲ್ಲ ಎಂದು ಟೀಕಿಸಿದರು.

ಉತ್ತರಪ್ರದೇಶದ ಮಿರ್ಝಾಪುರದ ಸರಕಾರಿ ಹಾಸ್ಟೆಲ್ ಒಂದರಲ್ಲಿ ವಿದ್ಯಾರ್ಥಿಗಳಿಗೆ ಚಪಾತಿಯ ಜೊತೆಗೆ ಉಪ್ಪು ಮಾತ್ರ ನೀಡುತ್ತಿದ್ದ ಪ್ರಕರಣವನ್ನು ಬಯಲಿಗೆ ತಂದ ಪತ್ರಕರ್ತ ಪ್ರಶಾಂತ್ ಕನೋಜಿಯಾರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಹಲವು ತಿಂಗಳ ಕಾಲ ಜೈಲಿಗಟ್ಟಲಾಯಿತು. ಉತ್ತರಪ್ರದೇಶದ ವಾರಣಾಸಿಯ ಗ್ರಾಮವೊಂದರ ನಿವಾಸಿಗಳ ದಯನೀಯ ಪರಿಸ್ಥಿತಿಯ ಬಗ್ಗೆ ಲೇಖನ ಬರೆದ ‘ಸ್ಕ್ರೋಲ್’ನ ಪತ್ರಕರ್ತೆ ಸುಪ್ರಿಯಾ ಶರ್ಮರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಉತ್ತರಪ್ರದೇಶದಲ್ಲೇ ನಡೆದ ಪಿಪಿಇ ಕಿಟ್ ಹಗರಣ ಬೆಳಕಿಗೆ ತಂದ ಪತ್ರಕರ್ತನ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ. ಈ ಸಂದರ್ಭಗಳಲ್ಲಿ ಬಿಜೆಪಿ ನಾಯಕರಿಗೆ ಪತ್ರಿಕಾ ಸ್ವಾತಂತ್ರ್ಯದ ನೆನಪಾಗಿಲ್ಲವೇ? ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಬಿಜೆಪಿಯವರು ಮಾತನಾಡುವುದೇ ಅವಮಾನಕರವಾಗಿದೆ ಎಂದು ಸುಪ್ರಿಯಾ ಶ್ರೀನೇತ ಹೇಳಿದರು. ತಾನೂ ಈ ಹಿಂದೆ 2 ದಶಕ ಪತ್ರಕರ್ತೆಯಾಗಿ ಕೆಲಸ ಮಾಡಿದ್ದೆ. ಅರ್ನಬ್ ಪತ್ರಿಕಾರಂಗಕ್ಕೇ ಒಂದು ಕಳಂಕವಾಗಿದ್ದು ಪತ್ರಕರ್ತನ ಸೋಗಿನಲ್ಲಿ ಬಿಜೆಪಿಯ ಮುಖವಾಣಿಯಾಗಿ ಕೆಲಸ ಮಾಡುತ್ತಿದ್ದಾರೆ.

ಜನರನ್ನು ಟೀಕಿಸುವಾಗ ಅಥವಾ ಮುಖಂಡರ ವಿರುದ್ಧ ಅರೋಪ ಕೇಳಿ ಬಂದಾಗ ತನ್ನ ಟಿವಿ ವಾಹಿನಿಯಲ್ಲಿ ಅವರು ಬಳಸುತ್ತಿದ್ದ ಪದಗಳು ಮಾಧ್ಯಮ ರಂಗಕ್ಕೆ ಹೇಳಿಸದ್ದಲ್ಲ. ಅವರೇನು ನ್ಯಾಯಾಧೀಶರೇ ಅಥವಾ ತೀರ್ಪುಗಾರರೇ ? ಎಂದು ಸುಪ್ರಿಯಾ ಪ್ರಶ್ನಿಸಿದ್ದಾರೆ. ಜಾಹೀರಾತು ನೀಡುವುದು, ಬೆದರಿಸುವುದು ಮತ್ತು ಭೀತಿ ಹುಟ್ಟಿಸುವ ಮೂಲಕ ಬಿಜೆಪಿ ಮಾಧ್ಯಮಗಳನ್ನು ನಿಯಂತ್ರಿಸುತ್ತಿದೆ. ಆ ಪಕ್ಷಕ್ಕೆ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News