ಬಿಹಾರ : ಪುತ್ರಿ ಪರ ಪ್ರಚಾರ ಮಾಡಿದ ಜೆಡಿಯು ಶಾಸಕ ಅಮಾನತು

Update: 2020-11-05 04:25 GMT

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಪುತ್ರಿಯ ಪರ ಪ್ರಚಾರ ಮಾಡಿದ ವಿಧಾನ ಪರಿಷತ್ ಸದಸ್ಯರೊಬ್ಬರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಮಾನತು ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ದಿನೇಶ್ ಕುಮಾರ್ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದ್ದು, ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಆರ್ಯ ಹೇಳಿದ್ದಾರೆ.

ಮುಝಫ್ಫರ್‌ಪುರ ಜಿಲ್ಲೆಯ ಗಾಯ್‌ಘಾಟ್ ಕ್ಷೇತ್ರದಿಂದ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪುತ್ರಿಯ ಪರವಾಗಿ ದಿನೇಶ್ ಕುಮಾರ್ ಸಿಂಗ್ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಈ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಜೆಡಿಯು ಈ ಕ್ಷೇತ್ರದಲ್ಲಿ ಮಹೇಶ್ವರ್ ಪ್ರಸಾದ್ ಯಾದವ್ ಅವರನ್ನು ಕಣಕ್ಕೆ ಇಳಿಸಿದ್ದು, ಇವರು ಅಧಿಕೃತ ಎನ್‌ಡಿಎ ಅಭ್ಯರ್ಥಿ. ಗಾಯ್‌ಘಾಟ್ ಕ್ಷೇತ್ರದಲ್ಲಿ ಮೂರನೇ ಹಾಗೂ ಅಂತಿಮ ಹಂತದಲ್ಲಿ ನವೆಂಬರ್ 7ರಂದು ಮತದಾನ ನಡೆಯಲಿದೆ.

ದಿನೇಶ್ ಕುಮಾರ್ ಯಾದವ್ ತಮ್ಮ ಪುತ್ರಿ ಕೋಮಲ್ ಅವರ ಪರವಾಗಿ ಪ್ರಚಾರ ಮಾಡುವಂತೆ ಸ್ಥಳೀಯ ಜೆಡಿಯು ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಮೇಲೂ ಒತ್ತಡ ಹಾಕುತ್ತಿದ್ದಾರೆ ಎಂದು ಆಪಾದಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಲು ವಿಧಾನ ಪರಿಷತ್ ಸದಸ್ಯ ನಿರಾಕರಿಸಿದ್ದಾರೆ.

ಕುತೂಹಲಕಾರಿ ಅಂಶವೆಂದರೆ ಸಿಂಗ್ ಪತ್ನಿ ವೀಣಾ ದೇವಿ ವೈಶಾಲಿ ಕ್ಷೇತ್ರದ ಎಲ್‌ಜೆಪಿ ಸಂಸದೆ. ಕಳೆದ ವರ್ಷ ಎಲ್‌ಜೆಪಿ ಮುಖಂಡ ರಾಂವಿಲಾಸ್ ಪಾಸ್ವಾನ್ ಅವರ ನಾಯಕತ್ವದಲ್ಲಿ ನಡೆದ ಚುನಾವಣೆಯಲ್ಲಿ ವೀಣಾದೇವಿ ಜೆಡಿಯು- ಜೆಬಿಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಯ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News