ಅರ್ನಬ್‍ಗೆ ಸಿಗದ ಜಾಮೀನು: ವಿಚಾರಣೆ ನ.6ಕ್ಕೆ ಮುಂದೂಡಿಕೆ

Update: 2020-11-05 12:18 GMT

ಮುಂಬೈ : ಇಂಟೀರಿಯರ್ ಡಿಸೈನರ್ ಅನ್ವಯ್ ನಾಯ್ಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ತನ್ನನ್ನು ಬಂಧಿಸಿರುವ ಮುಂಬೈ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಹಾಗೂ 2018ರಲ್ಲಿ ಈ ಪ್ರಕರಣ ಕುರಿತಂತೆ ತಮ್ಮ ವಿರುದ್ಧದ ಎಫ್‍ಐಆರ್ ರದ್ದುಗೊಳಿಸಬೇಕೆಂದು ಕೋರಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಸಲ್ಲಿಸಿರುವ ಅಪೀಲುಗಳ ಮೇಲಿನ ವಿಚಾರಣೆಯನ್ನು  ನವೆಂಬರ್ 6, ಶುಕ್ರವಾರ ಅಪರಾಹ್ನ 3 ಗಂಟೆ ತನಕ ಬಾಂಬೆ ಹೈಕೋಟ್ ಮುಂದೂಡಿದೆ.

ತಮ್ಮ ವಕೀಲರುಗಳಾದ ಆದಾರ್ ಪೊಂಡ ಹಾಗೂ ಹರೀಶ್ ಸಾಳ್ವೆ ಮೂಲಕ ಅಪೀಲು ಸಲ್ಲಿಸಿರುವ ಅರ್ನಬ್  ತಮ್ಮನ್ನು ಕನಿಷ್ಠ ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಕೋರಿದ್ದರು. ಈ ನಿರ್ದಿಷ್ಟ ಪ್ರಕರಣವನ್ನು ಎಪ್ರಿಲ್ 2019ರಲ್ಲಿಯೇ ಮುಚ್ಚಲಾಗಿರುವುದರಿಂದ  ಮರು ತನಿಖೆ ನಡೆಸುವುದೇ ಅಕ್ರಮವಾಗಿದೆ ಹಾಗೂ ಅರ್ನಬ್ ಅವರ ಬಂಧನ ಅಕ್ರಮವಾಗಿದೆ ಎಂದು ಹೇಳಿ ಅವರ ವಕೀಲರು ಅರ್ನಬ್ ಅವರಿಗೆ ಜಾಮೀನು ನೀಡಬೇಕೆಂದು ಕೋರಿದ್ದರು.

ಆದರೆ ಜಸ್ಟಿಸ್ ಎಸ್ ಎಸ್ ಶಿಂಧೆ ಹಾಗೂ ಜಸ್ಟಿಸ್ ಎಂ ಎಸ್ ಕಾರ್ಣಿಕ್ ಅವರನ್ನೊಳಗೊಂಡ ಪೀಠ ಅವರ ಅಪೀಲನ್ನು ಮನ್ನಿಸಿಲ್ಲ.  ರಾಜ್ಯ ಸರಕಾರ ಹಾಗೂ ಇತರ ಪ್ರತಿವಾದಿಗಳು ಹಾಗೂ ಈ ಪ್ರಕರಣದಲ್ಲಿ ಮಾಹಿತಿದಾರರು (ಅನ್ವಯ್ ನಾಯ್ಕ್ ಅವರ ಪತ್ನಿ  ಅಕ್ಷತಾ) ಅವರನ್ನು ಆಲಿಸದೆ  ಅಪೀಲನ್ನು ಮನ್ನಿಸಲು ಸಾಧ್ಯವಿಲ್ಲ, ಅವರಿಗೆ ತಡವಾಗಿ ನೋಟಿಸ್ ಜಾರಿಯಾಗಿರುವುದರಿಂದ ಇಂದು ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ನಬ್ ಅವರಿಗೆ ಬುಧವಾರ ಅಲಿಬಾಗ್ ನ್ಯಾಯಾಲಯ 14 ದಿನಗಳ ನ್ಯಾಯಾಂಬ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News