37 ಕಲ್ಲಿದ್ದಲು ನಿಕ್ಷೇಪಗಳ ಇ-ಹರಾಜಿಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ
ಹೊಸದಿಲ್ಲಿ, ನ.6: ಜಾರ್ಖಂಡ್ ಸೇರಿದಂತೆ ಐದು ರಾಜ್ಯಗಳಲ್ಲಿ 37 ಕಲ್ಲಿದ್ದಲು ನಿಕ್ಷೇಪಗಳನ್ನು ನವೆಂಬರ್ 9ರಂದು ಇ-ಹರಾಜು ಹಾಕುವಂತೆ ಸುಪ್ರೀಂಕೋರ್ಟ್ ಶುಕ್ರ ವಾರ ಆದೇಶ ನೀಡಿದೆ.
ನಿಕ್ಷೇಪಗಳ ಹರಾಜಿನಲ್ಲಿ ದೊರೆಯುವ ಯಾವುದೇ ಸ್ವರೂಪದ ಪ್ರಯೋಜನಗಳು ತಾತ್ಕಾಲಿಕವಾದುದು ಹಾಗೂ ಸುಪ್ರೀಂಕೋರ್ಟ್‌ನ ಆದೇಶಕ್ಕೆ ಅನುಗುಣವಾಗಿದೆ ಎಂದು ಎಲ್ಲಾ ಬಿಡ್ಡರ್‌ಗಳಿಗೂ ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಹರಾಜಿನಲ್ಲಿ ಲಭ್ಯವಾಗುವ ಕಲ್ಲಿದ್ದಲು ನಿಕ್ಷೇಪಗಳ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮರಗಳನ್ನು ಕಡಿಯಲಾಗುವುದಿಲ್ಲವೆಂದು ಕೇಂದ್ರ ಸರಕಾರದ ಪರ ವಕೀಲ ಕೆ.ಕೆ. ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.
ಜಾರ್ಖಂಡ್‌ನ ಪರಿಸರ ಸೂಕ್ಷ್ಮ ಪ್ರದೇಶದ 50ಕಿ.ಮೀ. ವ್ಯಾಪ್ತಿಯಲ್ಲಿರುವ ಯಾವುದೇ ಗಣಿ ನಿಕ್ಷೇಪವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಇ-ಹರಾಜು ಹಾಕಕೂಡದೆಂಬ ಆದೇಶವನ್ನು ಹೊರಡಿಸುವ ಇಂಗಿತವನ್ನು ತಾನು ಹೊಂದಿರುವುದಾಗಿ ಸರ್ವೋಚ್ಚ ನ್ಯಾಯಾಲಯವು ನವೆಂಬರ್ 4ರಂದು ನೀಡಿದ ಆದೇಶದಲ್ಲಿ ತಿಳಿಸಿತ್ತು.
ಗಣಿಗಾರಿಕೆಗಾಗಿ ಕಾಡುಗಳನ್ನು ನಾಶಪಡಿಸದಂತೆ ನೋಡಿಕೊಳ್ಳಲು ತಾನು ಬಯಸಿರುವುದಾಗಿ ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಜಾರ್ಖಂಡ್‌ನಲ್ಲಿನ ಪ್ರಸ್ತಾವಿತ ಗಣಿಗಾರಿಕೆ ಪ್ರದೇಶಕ್ಕೆ ಸಮೀಪದಲ್ಲಿನ ಸ್ಥಳಗಳು ಪರಿಸರ ಸೂಕ್ಷ್ಮ ವಲಯದ ಅರ್ಹತೆಯನ್ನು ಹೊಂದಿದೆಯೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸುವ ಬಗ್ಗೆ ತಾನು ಚಿಂತಿಸುತ್ತಿರುವುದಾಗಿ ಹೇಳಿದೆ.