×
Ad

ಆರ್‌ಟಿಐ ಕಾರ್ಯಕರ್ತರ ವೈಯಕ್ತಿಕ ಮಾಹಿತಿ ಬಹಿರಂಗ: ತನಿಖೆ ನಡೆಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

Update: 2020-11-06 21:22 IST

ಮುಂಬೈ, ನ.6: ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ವೆಬ್‌ಸೈಟ್‌ನಲ್ಲಿ 4,000ಕ್ಕೂ ಅಧಿಕ ಮಾಹಿತಿ ಹಕ್ಕು ಕಾರ್ಯಕರ್ತರ ವೈಯಕ್ತಿಕ ಮಾಹಿತಿ ಬಹಿರಂಗಗೊಂಡಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಬಾಂಬೆ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಇಂತಹ ಪ್ರಮಾದಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಜನತೆಯ ಮಾಹಿತಿ ಪಡೆಯುವ ಹಕ್ಕನ್ನು ಕ್ಷುಲ್ಲಕಗೊಳಿಸಿದಂತಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮ್‌ದಾರ್ ಮತ್ತು ಮಿಲಿಂದ್ ಜಾಧವ್ ಅವರಿದ್ದ ನ್ಯಾಯಪೀಠ ತಿಳಿಸಿದೆ.

ಇಲಾಖೆಯ ವೆಬ್‌ಸೈಟ್‌ನಿಂದ ತನ್ನ ವೈಯಕ್ತಿಕ ಮಾಹಿತಿಯನ್ನು ಅಳಿಸಿ ಹಾಕಲು ಸೂಚಿಸಬೇಕು ಎಂದು ಕೋರಿದ್ದ ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ಸಾಕೇತ್ ಗೋಖಲೆಯ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು. ತನಗೆ ಮಾನನಷ್ಟದ ಪರಿಹಾರವಾಗಿ 50 ಲಕ್ಷ ರೂ. ಪಾವತಿಸಲು ಸೂಚಿಸುವಂತೆಯೂ ಗೋಖಲೆ ಕೋರಿದ್ದರು. ಗೋಖಲೆಗೆ 25,000 ಹಣ ಪಾವತಿಸುವಂತೆ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ಸೂಚಿಸಿತು ಮತ್ತು 3 ತಿಂಗಳೊಳಗೆ ವಿಸ್ತೃತ ವರದಿ ಸಲ್ಲಿಸುವಂತೆ ನಿರ್ದೇಶಿಸಿತು.

ಅರ್ಜಿಯ ವಿಚಾರಣೆ ಸಂದರ್ಭ ಇಲಾಖೆ ಲಿಖಿತ ಕ್ಷಮಾಪಣೆ ಪತ್ರವನ್ನು ಸಲ್ಲಿಸಿತು ಮತ್ತು ಈ ಪ್ರಮಾದಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿತು. ಆರ್‌ಟಿಐ ಕಾರ್ಯಕರ್ತರ ವೈಯಕ್ತಿಕ ಮಾಹಿತಿ ಬಹಿರಂಗ ಅನಗತ್ಯವಷ್ಟೇ ಅಲ್ಲ, ಕೆಲವು ಸಮಾಜವಿರೋಧಿ ಶಕ್ತಿಗಳಿಗೆ ಕಾರ್ಯಕರ್ತರ ಮಾಹಿತಿ ಒದಗಿಸಿದಂತಾಗುತ್ತದೆ. ಇಲ್ಲಿ ಆಗಿರುವ ಲೋಪ ಗಂಭೀರ ಪ್ರಮಾಣದ್ದು ಎಂದು ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News