ಟಿಡಿಬಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಸ್‌ಟಿ ಅರ್ಚಕನ ನೇಮಕ

Update: 2020-11-06 16:19 GMT
ಸಾಂದರ್ಭಿಕ ಚಿತ್ರ

ತಿರುವನಂತಪುರ, ನ. 6: ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯಿಂದ ನಿರ್ವಹಣೆಯಾಗುತ್ತಿರುವ ದೇವಾಲಯವೊಂದಕ್ಕೆ ಪರಿಶಿಷ್ಟ ಪಂಗಡದ ವ್ಯಕ್ತಿ ಅರ್ಚಕರಾಗಿ ಶೀಘ್ರದಲ್ಲಿ ನೇಮಕರಾಗಲಿದ್ದಾರೆ. ಇದು ಟಿಡಿಬಿಯ ಇತಿಹಾಸದಲ್ಲೇ ಮೊದಲು.

ಟಿಡಿಬಿ ರಾಜ್ಯದ ದಕ್ಷಿಣದಲ್ಲಿ 1,200 ದೇವಾಲಯಗಳನ್ನು ನಿರ್ವಹಿಸುತ್ತಿದೆ. ತಾನು ನಿರ್ವಹಿಸುತ್ತಿರುವ ಈ ದೇವಾಲಯಗಳಲ್ಲಿ 18 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡದ ಅರ್ಚಕರು ಸೇರಿ ಒಟ್ಟು 19 ಕೆಳ ಜಾತಿಯ ಅರ್ಚಕರನ್ನು ನೇಮಿಸಲು ಟಿಡಿಬಿ ನಿರ್ಧರಿಸಿತ್ತು.

ಸ್ವಾಯತ್ತ ಸಂಸ್ಥೆಯಾಗಿರುವ ಟಿಡಿಬಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯ ಸೇರಿದಂತೆ ರಾಜ್ಯದ ಹಲವು ಪ್ರಖ್ಯಾತ ದೇವಾಲಯಗಳನ್ನು ನೋಡಿಕೊಳ್ಳುತ್ತಿದೆ.

''ಟಿಡಿಬಿ ಅಡಿಯಲ್ಲಿ ಬರುವ ದೇವಾಲಯದಲ್ಲಿ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಅರ್ಚಕನನ್ನಾಗಿ ನೇಮಕ ಮಾಡುತ್ತಿರುವುದು ಟಿಡಿಬಿಯ ಇತಿಹಾಸದಲ್ಲೇ ಮೊದಲು'' ಎಂದು ರಾಜ್ಯ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ವಿಶೇಷ ನೇಮಕಾತಿ ಮೂಲಕ ಅರ್ಚಕರ ಹುದ್ದೆಗಳಿಗೆ ಕೆಳ ಜಾತಿಯ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 2017ರಲ್ಲಿ ಪ್ರಕಟಿಸಲಾದ ರ್ಯಾಂಕ್ ಲಿಸ್ಟ್‌ನಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಅರೆ ಕಾಲಿಕ ಅರ್ಚಕರ ಹುದ್ದೆಗೆ ಇದುವರೆಗೆ 310 ಜನರು ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆ ಸಮಯದಲ್ಲಿ ಪರೀಕ್ಷೆಗೆ ಸಾಕಷ್ಟು ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಇಲ್ಲದೇ ಇದ್ದುದರಿಂದ, ವಿಶೇಷ ಅಧಿಸೂಚನಗೆ ಅನುಗುಣವಾಗಿ ಈ ಪ್ರತ್ಯೇಕ ರ್ಯಾಂಕ್ ಲಿಸ್ಟ್ ಅನ್ನು ಸಿದ್ಧಪಡಿಸಲಾಗಿತ್ತು. ಇದನ್ನು ನವೆಂಬರ್ 5ರಂದು ಪ್ರಕಟಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡಕ್ಕೆ 4 ಹುದ್ದೆ ಇರುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, 1 ಅರ್ಜಿಯನ್ನು ಮಾತ್ರ ಸ್ವೀಕರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News