ವಿಮಾನ ನಿಲ್ದಾಣದಲ್ಲಿ 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಲಾಗಿದೆ ಎಂಬ ಸುಳ್ಳು ಸುದ್ದಿ ಟ್ವೀಟ್ ಮಾಡಿದ ಬಿಜೆಪಿ ಸಚಿವ
ಗುವಾಹಟಿ: ನವೆಂಬರ್ 6ರಂದು ಬಿಜೆಪಿ ನಾಯಕ ಹಾಗೂ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವ ಸರ್ಮ ಅವರು ವೀಡಿಯೋವೊಂದನ್ನು ಟ್ವೀಟ್ ಮಾಡಿದರಲ್ಲದೆ ರಾಜ್ಯದ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (ಎಐಯುಡಿಎಫ್) ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಘೋಷಣೆಗಳನ್ನು ಕೂಗುತ್ತಿದ್ದಾರೆಂಬುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಬರೆದಿದ್ದರು. ಆದರೆ ವಾಸ್ತವವಾಗಿ ಎಐಯುಡಿಎಫ್ ಬೆಂಬಲಿಗರು ತಮ್ಮ ಸಂಘಟನೆ ಸದಸ್ಯರಾಗಿರುವ ಶಾಸಕ ಅಝೀಝ್ ಅಹ್ಮದ್ ಖಾನ್ ಅವರನ್ನು ಸ್ವಾಗತಿಸಲು 'ಅಝೀಝ್ ಖಾನ್ ಝಿಂದಾಬಾದ್' ಘೋಷಣೆಗಳನ್ನು ಕೂಗುತ್ತಿದ್ದರು ಎಂದು ತಿಳಿದು ಬಂದಿದೆ.
"ಸಂಸದ ಬದ್ರುದ್ದೀನ್ ಅಜ್ಮಲ್ ಅವರನ್ನು ಸ್ವಾಗತಿಸುವಾಗ ಈ ಮೂಲಭೂತವಾದಿಗಳು ಹಾಗೂ ದೇಶ ವಿರೋಧಿ ಜನರು ಹೇಗೆ ಬಹಿರಂಗವಾಗಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆಗಳನ್ನು ಕೂಗುತ್ತಿದ್ದಾರೆ ನೋಡಿ. ಇಂತಹ ಸಂಘಟನೆಯ ಜತೆಗೆ ಮೈತ್ರಿ ಸಾಧಿಸಿ ಇಂತಹ ಶಕ್ತಿಗಳನ್ನು ಉತ್ತೇಜಿಸುತ್ತಿರುವ ಕಾಂಗ್ರೆಸ್ ಪಕ್ಷದ ನಿಜ ರೂಪ ಬಯಲುಗೊಳಿಸಿದೆ. ನಾವು ಅವರ ವಿರುದ್ಧ ಹೋರಾಡುತ್ತೇವೆ, ಜೈ ಹಿಂದ್,'' ಎಂದು ಸರ್ಮ ಬರೆದಿದ್ದರು.
'ಟೈಮ್ಸ್ ನೌ', 'ಸಿಎನ್‍ಎನ್ ನ್ಯೂಸ್ 19 ಹಾಗೂ ನ್ಯೂಸ್ ನೇಷನ್‍ನಂತಹ ರಾಷ್ಟ್ರೀಯ ವಾಹಿನಿಗಳು ಹಾಗೂ ಪ್ರಾದೇಶಿಕ ವಾಹಿನಿಗಳಾದ ನ್ಯೂಸ್ ಲೈವ್ ಕೂಡ ಈ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವರು ಈ ವೀಡಿಯೋ ಶೇರ್ ಮಾಡಿದ್ದಾರೆ.
ವಾಸ್ತವವೇನು?: ಬದ್ರುದ್ದೀನ್ ಅಜ್ಮಲ್ ಇನ್ ಅಸ್ಸಾಂ ಎಂದು ಬರೆದು ಅಂತರ್ಜಾಲದಲ್ಲಿ ಸರ್ಚ್ ಮಾಡಿದಾಗ ನವೆಂಬರ್ 5ರ ಹಲವು ಸುದ್ದಿಗಳ ಫಲಿತಾಂಶ ದೊರಕಿದ್ದವು. ಅದರಲ್ಲಿ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಬೆಂಬಲಿಗರು ಸ್ವಾಗತಿಸಿದ ವರದಿಗಳಿದ್ದವು. ಈ ಸುದ್ದಿಯ ಹಲವು ವೀಡಿಯೋಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಬೆಂಬಲಿಗರು "ಅಝೀಝ್ ಖಾನ್ ಝಿಂದಾಬಾದ್'' ಹಾಗೂ "ಅಝೀಝ್ ಭಾಯಿ ಝಿಂದಾಬಾದ್'' ಹಾಗೂ "ಎಐಯುಡಿಎಫ್ ಝಿಂದಾಬಾದ್' ಹೇಳುತ್ತಿರುವುದು ಕೇಳಿಸುತ್ತದೆ. ಅಝೀಝ್ ಅಹ್ಮದ್ ಖಾನ್ ಅವರು ಅಸ್ಸಾಂನ ಕರೀಂಗಂಜ್ ದಕ್ಷಿಣದ ಎಐಯುಡಿಎಫ್ ಶಾಸಕರಾಗಿದ್ದಾರಲ್ಲದೆ ಅಜ್ಮಲ್ ಜತೆ ವಿಮಾನ ನಿಲ್ದಾಣದಲಿದ್ದರು.
ಎಐಡಿಯುಎಫ್ ಕೂಡ ತನ್ನ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಿ ಅಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿಲ್ಲ ಬದಲು ಅಝೀಝ್ ಖಾನ್ ಝಿಂದಾಬಾದ್ ಘೋಷಣೆ ಕೂಗಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದೆ.
ತರುವಾಯ ಪಾಕಿಸ್ತಾನ್ ಝಿಂದಾಬಾದ್ ಘೋಷಣೆಗಳನ್ನು ಕೂಗಲಾಗಿದೆ ಎಂದು ಹೇಳಿಕೊಂಡು ಪೊಲೀಸ್ ದೂರು ಕೂಡ ದಾಖಲಾಗಿದೆ, ಅದರ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಎಸ್‍ಪಿ ಜೆ ದಾಸ್ ಹೇಳಿದ್ದಾರೆ.