ಆರ್‌ಸಿಬಿ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಬಾರದು: ವೀರೆಂದ್ರ ಸೆಹ್ವಾಗ್

Update: 2020-11-08 18:34 GMT

ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸಿ, ಬೇರೊಬ್ಬರನ್ನು ಆಯ್ಕೆ ಮಾಡಬೇಕೆಂಬ ಮಾಜಿ ಸಹ ಆಟಗಾರ ಗೌತಮ್ ಗಂಭೀರ್ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳಲಾರೆ ಎಂದು ವೀರೆಂದ್ರ ಸೆಹ್ವಾಗ್ ಹೇಳಿದ್ದಾರೆ.

ಈಗ ನಡೆಯುತ್ತಿರುವ ಐಪಿಎಲ್‌ನ ಎಲಿಮಿನೇಟರ್ ಸುತ್ತಿನಲ್ಲಿ ಆರ್‌ಸಿಬಿ ನಿರ್ಗಮಿಸಿದ ಬಳಿಕ ಮಾತನಾಡಿದ ಗಂಭೀರ್, ತನ್ನ ಫ್ರಾಂಚೈಸಿಯ ಫಲಿತಾಂಶದ ಹೊಣೆಗಾರಿಕೆಯನ್ನು ವಹಿಸುವ ಸಮಯ ಕೊಹ್ಲಿಗೆ ಬಂದಿದೆ. ಕೊಹ್ಲಿ ಕಳೆದ 8 ವರ್ಷಗಳಿಂದ ಆರ್‌ಸಿಬಿ ನಾಯಕನಾಗಿದ್ದರೂ ಅವರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಹೇಳಿದ್ದರು.

ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೊಹ್ಲಿಯವರಿಗೆ ತನ್ನ ಬೆಂಬಲವನ್ನು ಮುಂದುವರಿಸಬೇಕೆಂದು ಹೇಳಿದ ಸೆಹ್ವಾಗ್, ‘‘ಒಬ್ಬ ನಾಯಕ ತನ್ನ ತಂಡದಷ್ಟೇ ಉತ್ತಮನಾಗಿರುತ್ತಾನೆ. ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಾಗ ಫಲಿತಾಂಶ ಪಡೆಯಲು ಸಫಲರಾಗಿದ್ದರು. ಅವರು ಏಕದಿನ, ಟ್ವೆಂಟಿ-20 ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಆದರೆ ಅವರು ಆರ್‌ಸಿಬಿ ನಾಯಕನಾಗಿದ್ದಾಗ ಅವರ ತಂಡ ಉತ್ತಮ ಪ್ರದರ್ಶನ ನೀಡಲು ಸಮರ್ಥವಾಗಿಲ್ಲ’’ಎಂದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶುಕ್ರವಾರ ನಡೆದ ಎಲಿಮಿನೇಟರ್ ಸುತ್ತಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಸೋತಿರುವ ಆರ್‌ಸಿಬಿಯ ಈ ವರ್ಷದ ಅಭಿಯಾನ ಕೊನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News