×
Ad

ಬಿಗ್‌ ಬಾಸ್ಕೆಟ್‌ಗೆ ದತ್ತಾಂಶ ಉಲ್ಲಂಘನೆಯ ಸಂಕಷ್ಟ: 2 ಕೋಟಿ ಬಳಕೆದಾರರ ವಿವರಗಳು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕೆ!

Update: 2020-11-09 20:53 IST

ಹೊಸದಿಲ್ಲಿ,ನ.9: ದಿನಸಿ ಸಾಮಗ್ರಿಗಳ ಇ-ವಾಣಿಜ್ಯ ತಾಣ ಬಿಗ್‌ಬಾಸ್ಕೆಟ್ ಸಂಭಾವ್ಯ ದತ್ತಾಂಶ ಉಲ್ಲಂಘನೆಗೊಳಗಾಗಿದ್ದು, ಸುಮಾರು ಎರಡು ಕೋಟಿ ಬಳಕೆದಾರರ ವಿವರಗಳು ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಬಲ್ ತಿಳಿಸಿದೆ.

ಈ ಸಂಬಂಧ ತಾನು ಬೆಂಗಳೂರಿನ ಸೈಬರ್ ಅಪರಾಧ ಘಟಕದಲ್ಲಿ ದೂರನ್ನು ದಾಖಲಿಸಿದ್ದೇನೆ ಮತ್ತು ಸೈಬರ್ ತಜ್ಞರ ಹೇಳಿಕೆಗಳನ್ನು ದೃಢಪಡಿಸಿಕೊಳ್ಳುತ್ತಿದ್ದೇನೆ ಎಂದು ಬಿಗ್‌ಬಾಸ್ಕೆಟ್ ಹೇಳಿಕೆಯಲ್ಲಿ ತಿಳಿಸಿದೆ.

ಬಿಗ್ ಬಾಸ್ಕೆಟ್‌ನಿಂದ ದತ್ತಾಂಶಗಳನ್ನು ಕದ್ದಿರುವ ಹ್ಯಾಕರ್ ಅವುಗಳನ್ನು ಡಾರ್ಕ್ ವೆಬ್‌ನಲ್ಲಿ 30 ಲ.ರೂ.ಗಳಿಗೆ ಮಾರಾಟಕ್ಕಿಟ್ಟಿದ್ದಾನೆ ಎಂದು ಸೈಬಲ್ ತಿಳಿಸಿದೆ.

ದತ್ತಾಂಶ ಕೋಶವು ಭಾಗಶಃ ಸೋರಿಕೆಯಾಗಿದ್ದು,ಸುಮಾರು 15 ಜಿಬಿಗಳ ಎಸ್‌ಕ್ಯೂಎಲ್ ಕಡತದಲ್ಲಿ ಎರಡು ಕೋಟಿ ಬಳಕೆದಾರರ ಹೆಸರುಗಳು,ಇಮೇಲ್ ಐಡಿಗಳು,ಪಾಸ್‌ವರ್ಡ್ ಹ್ಯಾಷ್‌ಗಳು, ಸಂಪರ್ಕ ಸಂಖ್ಯೆ (ಮೊಬೈಲ್ ಮತ್ತು ಸ್ಥಿರ ದೂರವಾಣಿ),ವಿಳಾಸ,ಜನ್ಮದಿನಾಂಕ,ತಾಣ ಮತ್ತು ಲಾಗಿನ್ ಐಪಿ ಅಡ್ರೆಸ್ ಸೇರಿದಂತೆ ಎಲ್ಲ ವಿವರಗಳಿವೆ ಎಂದು ಸೈಬಲ್ ಹೇಳಿದೆ.

ಸೈಬಲ್ ಪಾಸ್‌ವರ್ಡ್‌ಗಳ ಬಗ್ಗೆ ಉಲ್ಲೇಖಿಸಿದೆಯಾದರೂ ಬಿಗ್‌ಬಾಸ್ಕೆಟ್ ಎಸ್‌ಎಂಎಸ್ ಮೂಲಕ ಒಂದು ಸಲ ಬಳಕೆಯಾಗುವ ಪಾಸ್‌ವರ್ಡ್‌ನ್ನು ಬಳಸುತ್ತದೆ ಮತ್ತು ಬಳಕೆದಾರ ಪ್ರತಿ ಸಲ ಲಾಗಿನ್ ಆದಾಗಲೂ ಪಾಸ್‌ವರ್ಡ್ ಬದಲಾಗುತ್ತಿರುತ್ತದೆ.

ಬಳಕೆದಾರರ ಖಾಸಗಿತನ ಮತ್ತು ಗೋಪ್ಯತೆ ತನ್ನ ಆದ್ಯತೆಗಳಾಗಿವೆ ಮತ್ತು ಕ್ರೆಡಿಟ್ ಕಾರ್ಡ್ ನಂಬರ್ ಸೇರಿದಂತೆ ಯಾವುದೇ ಹಣಕಾಸು ಮಾಹಿತಿಯನ್ನು ತಾನು ಸ್ಟೋರ್ ಮಾಡುವುದಿಲ್ಲ ಮತ್ತು ಈ ಹಣಕಾಸು ದತ್ತಾಂಶ ಸುಭದ್ರವಾಗಿರುವ ವಿಶ್ವಾಸ ತನಗಿದೆ ಎಂದು ಬಿಗ್‌ಬಾಸ್ಕೆಟ್ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಗಳೂರು ಮೂಲದ ಬಿಗ್‌ಬಾಸ್ಕೆಟ್ ಅಲಿಬಾಬಾ ಗ್ರೂಪ್,ಮೈರೆ ಅಸೆಟ್ ಏಷ್ಯಾ ಗ್ರೋಥ್ ಫಂಡ್ ಮತ್ತು ಬ್ರಿಟನ್ ಸರಕಾರಿ ಒಡೆತನದ ಸಿಡಿಸಿ ಗ್ರೂಪ್‌ನಿಂದ ಆರ್ಥಿಕ ನೆರವು ಪಡೆದುಕೊಂಡಿದೆ.

2020,ಅ.30ರಂದು ಈ ದತ್ತಾಂಶ ಉಲ್ಲಂಘನೆ ನಡೆದಿದ್ದು ತಾನು ಅದನ್ನು ಅ.31ರಂದು ಪತ್ತೆ ಹಚ್ಚಿದ್ದೆ ಮತ್ತು ನ.1ರಂದು ಈ ವಿಷಯವನ್ನು ಕಂಪನಿಯ ಗಮನಕ್ಕೆ ತಂದಿದ್ದೆ ಎಂದು ಸೈಬಲ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News