ಬಿಹಾರ: 7 ಲಕ್ಷಕ್ಕೂ ಹೆಚ್ಚು ಮತದಾರರಿಂದ ‘ನೋಟಾ’ ಆಯ್ಕೆ

Update: 2020-11-11 16:26 GMT

ಪಾಟ್ನ, ನ.11: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನದ ಸಂದರ್ಭ 7,06,252 ಮತದಾರರು ‘ನೋಟಾ’ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಹಾರದಲ್ಲಿ ಹಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರ ‘ನೋಟಾ’ ಆಯ್ಕೆಗೆ ಬಿದ್ದ ಮತಕ್ಕಿಂತ ಕಡಿಮೆಯಾಗಿರುವುದು ಗಮನಾರ್ಹವಾಗಿದೆ. ಮತದಾನದ ಸಂದರ್ಭ ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಬಯಸದ ಮತದಾರ ‘ನನ್ ಆಫ್ ದಿ ಎಬವ್’(ನೋಟಾ) ಅಂದರೆ ಈ ಮೇಲಿನವರಲ್ಲಿ ಯಾರೂ ಅಲ್ಲ ಎಂಬ ಆಯ್ಕೆಯನ್ನು ಆರಿಸಬಹುದು.

ಬಿಹಾರ ವಿಧಾನಸಭೆಗೆ 3 ಹಂತಗಳಲ್ಲಿ ನಡೆದ ಮತದಾನದಲ್ಲಿ ಸುಮಾರು 7.3 ಕೋಟಿ ಮತದಾರರ ಪೈಕಿ 4 ಕೋಟಿಗೂ ಅಧಿಕ ಮಂದಿ(57.09%) ಮತ ಚಲಾಯಿಸಿದ್ದರು. ಇದರಲ್ಲಿ 1.7% (7,06,252) ಮತಗಳು ‘ನೋಟಾ’ಕ್ಕೆ ಚಲಾವಣೆಯಾಗಿದೆ. ಸುಪ್ರೀಂಕೋರ್ಟ್‌ನ ಸೂಚನೆಯಂತೆ ಇವಿಎಂಗಳಲ್ಲಿ (ವಿದ್ಯುನ್ಮಾನ ಮತಯಂತ್ರ) 2013ರಲ್ಲಿ ಸೇರ್ಪಡೆಗೊಳಿಸಲಾದ ನೋಟಾ ಆಯ್ಕೆಯು ತನ್ನದೇ ಆದ ಪ್ರತ್ಯೇಕ ಚಿಹ್ನೆ- ಮತಪತ್ರದ ಮೇಲೆ ಕಪ್ಪು ಬಣ್ಣದ ಅಡ್ಡಗೆರೆ ಹೊಂದಿದೆ. 2013ಕ್ಕೂ ಮೊದಲು, ನೋಟಾ ಆಯ್ಕೆ ಬಯಸುವ ಮತದಾರರು ‘ಫಾರ್ಮ್ 49-0’ಯನ್ನು ಭರ್ತಿ ಮಾಡಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News