×
Ad

ಉತ್ತರ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊರೋನದಿಂದ ಸಾವು

Update: 2020-11-14 09:06 IST

ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಕೆಲ ಉತ್ತರ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಹಾಗೂ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ದೆಹಲಿಯಲ್ಲಿ ಕಳೆದ ಹತ್ತು ದಿನಗಳಲ್ಲಿ ಸೋಂಕಿನಿಂದ 728 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಅವಧಿಯಲ್ಲಿ ಅತ್ಯಧಿಕ ಅಂದರೆ 1554 ಮಂದಿ ಸೋಂಕಿಗೆ ಬಲಿಯಾಗಿದ್ದನ್ನು ಹೊರತುಪಡಿಸಿದರೆ, ಇದು ಎರಡನೇ ಅತ್ಯಧಿಕ ಸಂಖ್ಯೆಯಾಗಿದೆ. ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದಿನ ಅವಧಿಯಲ್ಲಿ ಸಾವಿನ ಸಂಖ್ಯೆ ಕಡಿಮೆ ಇದ್ದ ಪಂಜಾಬ್ ಹಾಗೂ ಉತ್ತರಾಖಂಡದಲ್ಲೂ ಕಳೆದ 10 ದಿನಗಳಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ.

ಮಹಾರಾಷ್ಟ್ರ, ದೆಹಲಿಯ ಬಳಿಕ ನವೆಂಬರ್ 2 ರಿಂದ ನವೆಂಬರ್ 12ರ ಅವಧಿಯಲ್ಲಿ ಬಂಗಾಳ (549) ಮತ್ತು ಛತೀಸ್‌ಗಢ (309) ದಲ್ಲೂ ಅಧಿಕ ಸಾವು ಸಂಭವಿಸಿದೆ. ಹಿಂದಿನ 10 ದಿನಗಳಲ್ಲಿ 415 ಸಾವು ಸಂಭವಿಸಿದ್ದ ದೆಹಲಿಯಲ್ಲಿ ಸಾವಿನ ಸಂಖ್ಯೆ ಶೇಕಡ 75ರಷ್ಟು ಅಧಿಕವಾಗಿದೆ. ಆದರೆ ಬಂಗಾಳ ಹಾಗೂ ಛತ್ತೀಸ್‌ಗಢದಲ್ಲಿ ಇಳಿಮುಖವಾಗುತ್ತಿದೆ. ಹಿಂದಿನ 10 ದಿನಗಳಲ್ಲಿ 1113 ಸೋಂಕಿತರು ಮೃತಪಟ್ಟಿದ್ದ ಮಹಾರಾಷ್ಟ್ರ ದಲ್ಲಿ ಸಾವಿನ ಸಂಖ್ಯೆ 1554ಕ್ಕೇರಿದೆ.

ದೆಹಲಿ ಹೊರತುಪಡಿಸಿದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಅತ್ಯಧಿಕ ಹೆಚ್ಚಳ ಕಂಡುಬಂದಿರುವುದು ಹರ್ಯಾಣದಲ್ಲಿ. ಅಕ್ಟೋಬರ್ 23ರಿಂದ ನವೆಂಬರ್ 2ರ ಅವಧಿಯಲ್ಲಿ 105 ಮಂದಿ ಇಲ್ಲಿ ಸೋಂಕಿಗೆ ಬಲಿಯಾಗಿದ್ದರೆ, ನವೆಂಬರ್ 2-12ರ ಅವಧಿಯಲ್ಲಿ ಶೇಕಡ 61 ಮಂದಿ ಅಧಿಕ ಅಂದರೆ 169 ಮಂದಿ ಬಲಿಯಾಗಿದ್ದಾರೆ. ಪಂಜಾಬ್‌ನಲ್ಲಿ ಸಾವಿನ ಸಂಖ್ಯೆ ಈ ಅವಧಿಯಲ್ಲಿ 132ರಿಂದ 185ಕ್ಕೇರಿದ್ದರೆ, ಹಿಮಾಚಲ ಪ್ರದೇಶದಲ್ಲಿ 50 ರಿಂದ 75, ಉತ್ತರಾಖಂಡದಲ್ಲಿ 50 ರಿಂದ 64ಕ್ಕೇರಿದೆ.

ಇನ್ನೊಂದೆಡೆ ಛತ್ತೀಸ್‌ಗಢದಲ್ಲಿ ಸಾವಿನ ಸಂಖ್ಯೆ 470ರಿಂದ 309ಕ್ಕೆ ಇಳಿದಿದ್ದರೆ ಕರ್ನಾಟಕದಲ್ಲಿ 400 ರಿಂದ 253, ತಮಿಳುನಾಡಿನಲ್ಲಿ 325ರಿಂದ 257, ಆಂಧ್ರದಲ್ಲಿ 175ರಿಂದ 118ಕ್ಕೆ ಇಳಿದಿದೆ.

ಶುಕ್ರವಾರ ದೇಶದಲ್ಲಿ 44550 ಹೊಸ ಪ್ರಕರಣಗಳು ವರದಿಯಾಗಿದ್ದು, 536 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News