ಬಿಹಾರ ನೂತನ ಶಾಸಕರಲ್ಲಿ ಶೇ. 25 ಮಂದಿ ಮೇಲ್ವರ್ಗದವರು !

Update: 2020-11-14 04:48 GMT

ಪಾಟ್ನಾ : ಬಿಹಾರ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಪ್ರತಿ ನಾಲ್ವರು ಶಾಸಕರ ಪೈಕಿ ಒಬ್ಬರು (25%) ಮೇಲ್ವರ್ಗಕ್ಕೆ ಸೇರಿದವರು. 2015ರ ಚುನಾವಣೆಯಲ್ಲಿ ಕೇವಲ 53 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈ ಬಾರಿ ತನ್ನ ಬಲವನ್ನು 74ಕ್ಕೇರಿಸಿಕೊಳ್ಳುವಲ್ಲಿ ಈ ವರ್ಗ ಪ್ರಮುಖ ಪಾತ್ರ ವಹಿಸಿತ್ತು ಎಂದು timesofindia ವರದಿ ಮಾಡಿದೆ.

243 ಸದಸ್ಯ ಬಲದ ವಿಧಾನಸಭೆಯಲ್ಲಿ ಮೇಲ್ವರ್ಗಕ್ಕೆ ಸೇರಿದ ಒಟ್ಟು ಸದಸ್ಯರ ಸಂಖ್ಯೆ 64. ಈ ಪೈಕಿ 45 ಮಂದಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದವರಾಗಿದ್ದಾರೆ. (ಬಿಜೆಪಿ 33, ಜೆಡಿಯು-9, ವಿಐಪಿ-2, ಎಚ್‌ಎಎಂ-ಎಸ್ 1). ಮಹಾ ಮೈತ್ರಿಕೂಟದಿಂದ ಒಟ್ಟು 17 ಮಂದಿ ಮೇಲ್ವರ್ಗದ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಆರ್‌ಜೆಡಿ ಹಾಗೂ ಕಾಂಗ್ರೆಸ್ ಪಕ್ಷದಿಂದ ತಲಾ ಆರು ಮಂದಿ ಹಾಗೂ ಸಿಪಿಐನಿಂದ ಒಬ್ಬರು ಆಯ್ಕೆಯಾಗಿದ್ದಾರೆ.

ಎರಡು ಪ್ರಮುಖ ಮೈತ್ರಿಕೂಟ ಹೊರತುಪಡಿಸಿ ಎಲ್‌ಜೆಪಿನಿಂದ ಒಬ್ಬರು ಮೇಲ್ವರ್ಗದ ಪ್ರತಿನಿಧಿ ಆಯ್ಕೆಯಾಗಿದ್ದಾರೆ. ಚಕಾಯಿ ಶಾಸಕ ಸುಮಿತ್ ಕುಮಾರ್ ಸಿಂಗ್ ಎಂಬ ಪಕ್ಷೇತರ ಕೂಡಾ ಮೇಲ್ವರ್ಗಕ್ಕೆ ಸೇರಿದವರು. ರಜಪೂತ್, ಭೂಮಿಹಾರ್, ಬ್ರಾಹ್ಮಣರು ಮತ್ತು ಕಾಯಸ್ಥ ಜನಾಂಗದವರು ಮೇಲ್ವರ್ಗದಲ್ಲಿ ಸೇರುತ್ತಾರೆ. 64 ಮೇಲ್ವರ್ಗದ ಶಾಸಕರ ಪೈಕಿ 28 ಮಂದಿ ರಜಪೂತರು. 21 ಮಂದಿ ಭೂಮಿಹಾರರು. 12 ಮಂದಿ ಬ್ರಾಹ್ಮಣರು ಹಾಗೂ ಮೂವರು ಕಾಯಸ್ಥರು.

2015ರ ಚುನಾವಣೆಯಲ್ಲಿ ಮೇಲ್ವರ್ಗದ 52 ಸದಸ್ಯರು ವಿಧಾನಸಭೆಯಲ್ಲಿದ್ದರು. ಈ ಬಾರಿ ಮೇಲ್ವರ್ಗದ ಬಲ ಹೆಚ್ಚಿದ್ದು, 12 ಮಂದಿ ಅಧಿಕ ಸದಸ್ಯರು ಚುನಾಯಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News