ಮಧ್ಯ ಪ್ರದೇಶ ಬಿಜೆಪಿ ಉಸ್ತುವಾರಿಯಾಗಿ ಮುರಳೀಧರ್ ರಾವ್‍ ನೇಮಕ: ಸಿಟಿ ರವಿಗೆ ಮಹಾರಾಷ್ಟ್ರ, ಗೋವಾ ಜವಾಬ್ದಾರಿ

Update: 2020-11-14 06:40 GMT
ಮುರಳೀಧರ್, ಸಿಟಿ ರವಿ

ಹೊಸದಿಲ್ಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ಪದಾಧಿಕಾರಿಗಳ ಪುನರ್ ಸಂಘಟನೆ ನಡೆಸಿದ್ದಾರೆ ಹಾಗೂ ಕೆಲವೊಂದು ಹೊಸ ನೇಮಕಾತಿಗಳನ್ನು ಮಾಡಿದ್ದಾರೆ. 

ಇತ್ತೀಚೆಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಗಿದ್ದ ಪಿ ಮುರಳೀಧರ್ ರಾವ್ ಅವರನ್ನು ಮಧ್ಯಪ್ರದೇಶದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಆದರೆ ಪಕ್ಷದ ಪದಾಧಿಕಾರಿಗಳ ಪಟ್ಟಿಯಿಂದ ಇತ್ತೀಚೆಗೆ ಕೈಬಿಡಲಾಗಿದ್ದ ರಾಮ್ ಮಾಧವ್ ಅವರಿಗೆ ಯಾವುದೇ ಜವಾಬ್ದಾರಿ ವಹಿಸಲಾಗಿಲ್ಲ.

ಹೊಸತಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿಗಳಾದ ತರುಣ್ ಚುಗ್ ಅವರನ್ನು ಜಮ್ಮು ಕಾಶ್ಮೀರ, ಲಡಾಖ್ ಹಾಗೂ ತೆಲಂಗಾಣ ಬಿಜೆಪಿ ಉಸ್ತುವಾರಿಯನ್ನಾಗಿಸಲಾಗಿದ್ದು, ಸಿಟಿ ರವಿ  ಅವರಿಗೆ ಮಹಾರಾಷ್ಟ್ರ, ಗೋವಾ ಹಾಗೂ ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ತಮಿಳುನಾಡಿನ ಪಕ್ಷದ ವ್ಯವಹಾರಗಳ ಉಸ್ತುವಾರಿಯನ್ನು ವಹಿಸಲಾಗಿದೆ. ಡಿ ಪುರಂದೇಶ್ವರಿ ಅವರಿಗೆ ಛತ್ತೀಸಗಢ ಮತ್ತು ಒಡಿಶಾದ ಜವಾಬ್ದಾರಿ ವಹಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಅವರಿಗೆ ದಿಲ್ಲಿ ಹಾಗೂ ಚುನಾವಣೆ ನಡೆಯಲಿರುವ ಅಸ್ಸಾಂನ ಜವಾಬ್ದಾರಿ ವಹಿಸಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಪೈಕಿ ದಲಿತ ನಾಯಕರಾಗಿರುವ ದುಷ್ಯಂತ್ ಕುಮಾರ್ ಗೌತಮ್ ಅವರಿಗೆ ಪಂಜಾಬ್, ಚಂಡೀಗಢ ಮತ್ತು ಉತ್ತರಾಖಂಡದ ಜವಾಬ್ದಾರಿ ವಹಿಸಲಾಗಿದೆ.

ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಬಿಜೆಪಿ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಅವರನ್ನು ಉತ್ತರ ಪ್ರದೇಶದ ಉಸ್ತುವಾರಿಯನ್ನಾಗಿ ಸಲಾಗಿದೆ.  ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ  ಬಿಜೆಪಿ ಉಸ್ತುವಾರಿಯಾಗಿ ಕೈಲಾಶ್ ವಿಜಯ್ ವರ್ಗಿಯಾ ಅವರನ್ನು ಉಳಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News