ಎನ್ ಸಿಯ ಮಾಜಿ ಶಾಸಕನಿಗೆ ದುಬೈ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ

Update: 2020-11-15 07:44 GMT

ಹೊಸದಿಲ್ಲಿ: ನ್ಯಾಶನಲ್ ಕಾನ್ಫರೆನ್ಸ್ನ ಮಾಜಿ ಶಾಸಕ ಅಲ್ತಾಫ್ ಅಹ್ಮದ್ ವಾನಿ ಅವರಿಗೆ ದಿಲ್ಲಿ ವಿಮಾನ ನಿಲ್ದಾಣದಿಂದ ದುಬೈ ವಿಮಾನದಲ್ಲಿ ಪ್ರಯಾಣಿಸಲು ಗುರುವಾರ ಅಧಿಕಾರಿಗಳು ನಿರ್ಬಂಧ ವಿಧಿಸಿದರು.

ಗೃಹ ಖಾತೆಯ ವಿದೇಶ ಪ್ರಯಾಣ ನಿರ್ಬಂಧಿಸಿದವರ ಪಟ್ಟಿಯಲ್ಲಿ ಜಮ್ಮು ಹಾಗೂ ಕಾಶ್ಮೀರದ 33ಕ್ಕೂ ಅಧಿಕ ರಾಜಕಾರಣಿಗಳು ಇದ್ದಾರೆ. ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಈ ನಿರ್ಬಂಧ ಹೇರಲಾಗಿದೆ. ಈ ಪಟ್ಟಿಯಲ್ಲಿ ವಾನಿ ಅವರು ಕೂಡ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರ ಹೆಸರು ಪಟ್ಟಿಯಲ್ಲಿ ಇಲ್ಲ. ಆದರೆ, ವಿವಿಧ ರಾಜಕೀಯ ಪಕ್ಷಗಳ ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ಹೆಸರು ಇದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೊಸೆಯ ನಿಶ್ಚಿತಾರ್ಥಕ್ಕೆ ದುಬಾಯಿಗೆ ತೆರಳಬೇಕಿತ್ತು. ದಿಲ್ಲಿ ವಿಮಾನ ನಿಲ್ದಾಣದ ಇಮಿಗ್ರೇಷನ್ನಲ್ಲಿ ನನ್ನನ್ನು ಅಧಿಕಾರಿಗಳು ನಾಲ್ಕು ಗಂಟೆಗಳ ಕಾಲ ವಶದಲ್ಲಿ ಇರಿಸಿದರು. ಅನಂತರ ದುಬಾಯಿಗೆ ತೆರಳದಂತೆ ನಿರ್ಬಂಧ ವಿಧಿಸಿದರು ಎಂದು ಅವರು ಹೇಳಿದ್ದಾರೆ.

ದಿಲ್ಲಿ ವಿಮಾನ ನಿಲ್ದಾಣದಿಂದ ವೇಳಾಪಟ್ಟಿಯಂತೆ ರಾತ್ರಿ 8 ಗಂಟೆಗೆ ವಿಮಾನ ತೆರಳುವ ಕೆಲವು ನಿಮಿಷಕ್ಕಿಂತ ಮುನ್ನ ಇಮಿಗ್ರೇಷನ್ ಅಧಿಕಾರಿಗಳು ನನ್ನನ್ನು ವಶಕ್ಕೆ ಪಡೆದರು.  ಜಮ್ಮು ಹಾಗೂ ಕಾಶ್ಮೀರದ ರಾಜಕಾರಣಿಗಳು ವಿದೇಶಕ್ಕೆ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ 2021 ಮಾರ್ಚ್ ವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ನನಗೆ ತಿಳಿಸಿದರು ಎಂದು ವಾನಿ ಹೇಳಿದ್ದಾರೆ.

 ನನ್ನ ಲಗೇಜ್ ಅದಾಗಲೇ ವಿಮಾನದಲ್ಲಿ ಇರಿಸಿರುವುದರಿಂದ ಅದು ದುಬೈಗೆ ತಲುಪಿದೆ. ಅಧಿಕಾರಿಗಳು ನನ್ನನ್ನು ಬಿಡುಗಡೆ ಮಾಡಿದ ಬಳಿಕ ಕೆಲವು ಬಟ್ಟೆಗಳನ್ನು ಖರೀದಿಸಿ ಹಿಂದಿರುಗಿದೆ ಎಂದು ಅವರು ಹೇಳಿದ್ದಾರೆ.

 ನನ್ನನ್ನು ಯಾಕೆ ವಶದಲ್ಲಿ ಇರಿಸಲಾಯಿತು. ವಿದೇಶಕ್ಕೆ ತೆರಳದಂತೆ ಯಾಕೆ ನಿರ್ಬಂಧ ವಿಧಿಸಲಾಯಿತು ಎಂಬ ಬಗ್ಗೆ ತನಗೆ ತಿಳಿದಿಲ್ಲ. ಇದು ನನಗೆ ನಿರಾಶೆ ಹಾಗೂ ಖಿನ್ನತೆ ಉಂಟು ಮಾಡಿದೆ ಎಂದು ವಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News