ಬಿಹಾರ ಚುನಾವಣೆ ಸಂದರ್ಭ ರಾಹುಲ್ ಗಾಂಧಿ ಪಿಕ್ನಿಕ್ ನಲ್ಲಿದ್ದರು: ಆರ್ ಜೆಡಿ ನಾಯಕನ ಅಸಮಾಧಾನ
ಪಾಟ್ನಾ: “ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿಮ್ಲಾದಲ್ಲಿರುವ ಪ್ರಿಯಾಂಕಾ ಅವರ ಮನೆಯಲ್ಲಿ ಪಿಕ್ನಿಕ್ ನಲ್ಲಿದ್ದರು. ಪಕ್ಷವೊಂದನ್ನು ಈ ರೀತಿ ನಡೆಸಲಾಗುತ್ತದೆಯೇ?, ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿರುವ ರೀತಿಯಿಂದಾಗಿ ಅದು ಬಿಜೆಪಿಗೆ ಲಾಭ ತರುತ್ತಿದೆ ಎಂಬ ಆರೋಪಗಳನ್ನೂ ಮಾಡಬಹುದಾಗಿದೆ'' ಎಂದು ಆರ್ ಜೆಡಿ ನಾಯಕ ಶಿವಾನಂದ ತಿವಾರಿ ಹೇಳಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗೆ ನಡೆದ ಅತ್ಯಂತ ನಿಕಟ ಸ್ಪರ್ಧೆಯಲ್ಲಿ ಮಹಾಮೈತ್ರಿಕೂಟಕ್ಕೆ ಬಹುಮತ ಕೆಲವೇ ಕೆಲವು ಸ್ಥಾನಗಳಿಂದ ತಪ್ಪಿರುವುದು ಆರ್ ಜೆಡಿಯ ಹಲವು ನಾಯಕರಲ್ಲಿ ಅಸಮಾಧಾನ ಉಂಟು ಮಾಡಿದೆ. ಕಾಂಗ್ರೆಸ್ ಅರೆ ಮನಸ್ಸಿನಿಂದ ಹೋರಾಟ ನಡೆಸಿದೆ ಎಂದು ತಿವಾರಿ ಆರೋಪಿಸಿದ್ದಾರೆ.
“ಮಹಾಮೈತ್ರಿಕೂಟಕ್ಕೆ ಕಾಂಗ್ರೆಸ್ ಒಂದು ಸರಪಳಿಯಂತಾಯಿತು. ಅವರು 70 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ ಕನಿಷ್ಠ 70 ರ್ಯಾಲಿ ನಡೆಸಿಲ್ಲ. ರಾಹುಲ್ ಗಾಂಧಿ ಮೂರು ದಿನ ಇಲ್ಲಿದ್ದರು. ಪ್ರಿಯಾಂಕ ಅವರು ಬಂದಿಲ್ಲ. ಬಿಹಾರ ರಾಜಕೀಯದ ಬಗ್ಗೆ ಹೆಚ್ಚು ತಿಳಿದಿಲ್ಲದೇ ಇರುವವರು ಇಲ್ಲಿಗೆ ಬಂದರು, ಇದು ಸರಿಯಲ್ಲ'' ಎಂದು ತಿವಾರಿ ಹೇಳಿದ್ದಾರೆ.
“ಇದು ಬಿಹಾರ ರಾಜ್ಯವೊಂದಕ್ಕೇ ಸೀಮಿತವಲ್ಲ. ಇತರ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಗರಿಷ್ಠ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಈ ಕುರಿತು ಯೋಚಿಸಬೇಕಿದೆ'' ಎಂದು ಅವರು ಹೇಳಿದರು.