ಲಕ್ಷ್ಮಿವಿಲಾಸ ಬ್ಯಾಂಕಿನ ಖಾತೆಗಳ ಸ್ತಂಭನ: ಹಣ ಹಿಂದೆಗೆತಕ್ಕೆ 25,000 ರೂ.ಗಳ ಮಿತಿ

Update: 2020-11-17 15:27 GMT

ಹೊಸದಿಲ್ಲಿ,ನ.17: ಕೇಂದ್ರ ಸರಕಾರವು ಲಕ್ಷ್ಮಿ ವಿಲಾಸ ಬ್ಯಾಂಕ್(ಎಲ್‌ವಿಬಿ)ನಲ್ಲಿಯ ಖಾತೆಗಳನ್ನು 2020,ನ.17ರಿಂದ 2020,ಡಿ.16ರವರೆಗೆ ಒಂದು ತಿಂಗಳ ಅವಧಿಗೆ ಸ್ತಂಭನಗೊಳಿಸಿದೆ. ಆರ್‌ಬಿಐ ಅರ್ಜಿಯ ಮೇರೆಗೆ ಸರಕಾರವು ಈ ಆದೇಶವನ್ನು ಹೊರಡಿಸಿದೆ. ಸ್ತಂಭನದ ಅವಧಿಯಲ್ಲಿ ಗ್ರಾಹಕರು ತಮ್ಮ ಖಾತೆಗಳಿಂದ 25,000 ರೂ.ಗೂ ಹೆಚ್ಚಿನ ಹಣವನ್ನು ಹಿಂಪಡೆಯುವಂತಿಲ್ಲ.

ಆರ್‌ಬಿಐನಿಂದ ವಿಶೇಷ ಆದೇಶಗಳನ್ನು ಸ್ವೀಕರಿಸಿದ ಬಳಿಕ ಬ್ಯಾಂಕು ವೈದ್ಯಕೀಯ ಚಿಕಿತ್ಸೆ,ಶಿಕ್ಷಣ,ವಿವಾಹ ಮತ್ತು ಅನಿವಾರ್ಯ ತುರ್ತು ಸಂದರ್ಭಗಳಿಗೆ ಮಿತಿಗಿಂತ ಹೆಚ್ಚಿನ ಹಣವನ್ನು ನೀಡಬಹುದು.

ಎಲ್‌ವಿಬಿ ಹಣಕಾಸು ಮುಗ್ಗಟ್ಟನ್ನೆದುರಿಸುತ್ತಿದ್ದು,ಕಳೆದ ಸೆಪ್ಟಂಬರ್‌ನಲ್ಲಿ ನಡೆದಿದ್ದ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಶೇರುದಾರರು ಎಮ್‌ಡಿ ಮತ್ತು ಸಿಇಒ ಎಸ್.ಸುಂದರ್ ಸೇರಿದಂತೆ ಏಳು ಆಡಳಿತ ಮಂಡಳಿ ಸದಸ್ಯರನ್ನು ಪದಚ್ಯುತಗೊಳಿಸಿದ್ದರು. ಬಳಿಕ ಆರ್‌ಬಿಐ ಸ್ವತಂತ್ರ ನಿರ್ದೇಶಕರಾದ ಮೀತಾ ಮಾಖನ್,ಶಕ್ತಿ ಸಿನ್ಹಾ ಮತ್ತು ಸತೀಶ ಕುಮಾರ್ ಕಾಲ್ರಾ ಅವರನ್ನೊಳಗೊಂಡ ಮೂವರು ಸದಸ್ಯರ ನಿರ್ದೇಶಕರ ಸಮಿತಿಯನ್ನು ರಚಿಸಿತ್ತು.

 2020,ಜೂನ್‌ನಲ್ಲಿ ಗುರ್ಗಾಂವ್‌ನ ಹಣಕಾಸೇತರ ಬ್ಯಾಂಕಿಂಗ್ ಸಂಸ್ಥೆ ಕ್ಲಿಕ್ಸ್ ಗ್ರೂಪ್ ಜೊತೆ ವಿಲೀನ ಒಪ್ಪಂದಕ್ಕೆ ಬ್ಯಾಂಕು ಸಹಿ ಹಾಕಿತ್ತು. ವಿಲೀನದೊಂದಿಗೆ ಹಾಲಿ 1,200 ಕೋ.ರೂ.ಗಳಿರುವ ಬ್ಯಾಂಕಿನ ನಿವ್ವಳ ಮೌಲ್ಯ 3,100 ಕೋ.ರೂ.ಗೆ ಏರಲಿದೆ. ಕ್ಲಿಕ್ಸ್ ಕ್ಯಾಪಿಟಲ್ 1,900 ಕೋ.ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದೆ.

1,500 ಕೋ.ರೂ.ವರೆಗೆ ನಿಧಿ ಎತ್ತುವಳಿ ಯೋಜನೆಗಳಿಗೆ ಮತ್ತು ವಿದೇಶಿ ಶೇರು ಬಂಡವಾಳವನ್ನು ಈಗಿನ ಶೇ.12.35ರಿಂದ ಶೇ.74ಕ್ಕೆ ಹೆಚ್ಚಿಸಲು ಬ್ಯಾಂಕಿನ ಆಡಳಿತ ಮಂಡಳಿಯು ಕಳೆದ ಸೆಪ್ಟಂಬರ್‌ನಲ್ಲಿ ಒಪ್ಪಿಗೆಯನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News