ರಾಜ್ಯಸಭೆಗೆ ಎಸ್.ಜೈಶಂಕರ್ ಆಯ್ಕೆ: ಸುಪ್ರೀಂನಿಂದ ನೋಟಿಸ್ ಜಾರಿ

Update: 2020-11-18 15:52 GMT

ಹೊಸದಿಲ್ಲಿ,ನ.18: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನು ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ನೋಟಿಸ್‌ಗಳನ್ನು ಹೊರಡಿಸಿದೆ.

ರಾಜ್ಯಸಭೆಯ ಪ್ರಾಸಂಗಿಕ ಮತ್ತು ನಿಯಮಿತ ಸ್ಥಾನಗಳಿಗೆ ಉಪಚುನಾವಣೆಗಳನ್ನು ನಡೆಸಲು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸುವ ಚುನಾವಣಾ ಆಯೋಗದ ಅಧಿಕಾರವನ್ನೂ ಅರ್ಜಿಗಳು ಪ್ರಶ್ನಿಸಿವೆ. ಕಾಂಗ್ರೆಸ್ ನಾಯಕ ಗೌರವ ಪಾಂಡ್ಯ ಅವರು ಅರ್ಜಿದಾರರಲ್ಲಿ ಸೇರಿದ್ದಾರೆ.

ಶೀಘ್ರವೇ ವಿಚಾರಣೆಗೆ ದಿನಾಂಕವನ್ನು ನಿಗದಿಗೊಳಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ತಿಳಿಸಿತು.

ಜೈಶಂಕರ್ ಪರ ಹಾಜರಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ನೋಟಿಸ್‌ನ್ನು ಸ್ವೀಕರಿಸಿದರು.

2019ರಲ್ಲಿ ಗುಜರಾತ್ ನಿಂದ ರಾಜ್ಯಸಭೆಯ ಎರಡು ಸ್ಥಾನಗಳಿಗೆ ನಡೆದಿದ್ದ ಉಪಚುನಾವಣೆಗಳಿಗೆ ಈ ಅರ್ಜಿಗಳು ಸಂಬಂಧಿಸಿವೆ. ಎರಡೂ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.

ರಾಜ್ಯಸಭೆಗೆ ಜೈಶಂಕರ್ ಆಯ್ಕೆಯನ್ನು ಪ್ರಶ್ನಿಸಿ ಪಾಂಡ್ಯ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಉಚ್ಚ ನ್ಯಾಯಾಲಯವು ಕಳೆದ ಫೆ.4ರಂದು ವಜಾಗೊಳಿಸಿತ್ತು. ಬಿಜೆಪಿ ಅಭ್ಯರ್ಥಿ ಜುಗಲ್‌ಜಿ ಠಾಕೂರ್ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕರಾದ ಚಂದ್ರಿಕಾಬೆನ್ ಚೂಡಾಸಮಾ ಮತ್ತು ಪರೇಶಕುಮಾರ ಧನಾನಿ ಅವರು ಸಲ್ಲಿಸಿದ್ದ ಅರ್ಜಿಗಳನ್ನೂ ಅದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಚೂಡಾಸಮಾ ಮತ್ತು ಧನಾನಿ ಅವರೂ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.

ಉಪಚುನಾವಣೆಗಳಲ್ಲಿ ಜೈಶಂಕರ್ ಮತ್ತು ಠಾಕೂರ್ ಅನುಕ್ರಮವಾಗಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಪಾಂಡ್ಯ ಮತ್ತು ಚೂಡಾಸಮಾ ಅವರನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News