ಉತ್ತರ ಪ್ರದೇಶ: ಬಿಡಾಡಿ ದನಗಳ ದತ್ತು ಯೋಜನೆಗೆ ನೀರಸ ಸ್ಪಂದನ
ಲಕ್ನೋ, ನ.19: ಉತ್ತರ ಪ್ರದೇಶ ಸರಕಾರ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಜಾರಿಗೆ ತಂದ ಬಿಡಾಡಿ ಹಸುಗಳ ದತ್ತು ಯೋಜನೆ ಬಗೆಗೆ ಜನ ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ.
ಈ ಯೋಜನೆಯಡಿ ವಾಣಿಜ್ಯವಾಗಿ ಲಾಭದಾಯಕ ಅಲ್ಲದ ಹಸುಗಳನ್ನು ದತ್ತು ಪಡೆಯುವವರಿಗೆ ಸರಕಾರ ಮಾಸಿಕ 900 ರೂಪಾಯಿಗಳನ್ನು ನೀಡುತ್ತದೆ. ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಮತ್ತು ಬಿಡಾಡಿ ಹಸುಗಳ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು.
ಈ ಯೋಜನೆಯಡಿ ಜನರು ಗರಿಷ್ಠ ನಾಲ್ಕು ಬಿಡಾಡಿ ಹಸುಗಳನ್ನು ದತ್ತು ಪಡೆಯಬಹುದಾಗಿದ್ದು, ಪ್ರತಿ ಜಾನುವಾರಿಗೆ ಪ್ರತಿದಿನ ತಲಾ 30 ರೂಪಾಯಿಗಳ ನಿರ್ವಹಣಾ ಶುಲ್ಕವನ್ನು ಸರಕಾರ ನೀಡುತ್ತದೆ. ಆದರೆ ಈ ಯೋಜನೆಗೆ ಆರಂಭದಲ್ಲಿ ಉತ್ತಮ ಸ್ಪಂದನ ಕಂಡುಬಂದರೂ, ಇತ್ತೀಚಿನ ದಿನಗಳಲ್ಲಿ ದತ್ತು ಪಡೆಯುವವರಿಲ್ಲದೇ ಯೋಜನೆ ಸೊರಗುತ್ತಿದೆ ಎಂದು ರಾಜ್ಯ ಸರಕಾರದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 26,500 ರೈತರು 54 ಸಾವಿರ ಬಿಡಾಡಿ ದನಗಳನ್ನು ದತ್ತು ಪಡೆದಿದ್ದರು. ಮುಂದಿನ ಅನುಸರಣೆ ಮತ್ತು ನಿಗಾ ಇಡುವ ದೃಷ್ಟಿಯಿಂದ ದತ್ತು ಪಡೆಯುವ ವೇಳೆ ಪ್ರತಿ ದನದ ಕಿವಿಗೆ ಟ್ಯಾಗ್ ಹಾಕಲಾಗುತ್ತದೆ. ಇದೀಗ ಯೋಜನೆಗೆ ಜನಸ್ಪಂದನ ಇಲ್ಲದ ಹಿನ್ನೆಲೆಯಲ್ಲಿ ಸರಕಾರ ತನ್ನ ಕಾರ್ಯತಂತ್ರ ಪರಿಷ್ಕರಣೆಗೆ ಮುಂದಾಗಿದೆ. ಕಳೆದ ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್, ಮುಂದಿನ ಮೂರು ತಿಂಗಳಲ್ಲಿ ಒಂದು ಲಕ್ಷ ಹಸುಗಳನ್ನು ದತ್ತು ನೀಡಲಾಗುವುದು ಎಂದು ಘೋಷಿಸಿದ್ದರು. ಆದರೆ ಎರಡೂವರೆ ತಿಂಗಳಲ್ಲಿ ಕೇವಲ 10 ಸಾವಿರ ಹಸುಗಳನ್ನು ರೈತರು ದತ್ತು ಪಡೆದಿದ್ದಾರೆ. ಸರಕಾರದ ಅಂಕಿಅಂಶಗಳ ಪ್ರಕಾರ 4 ಲಕ್ಷ ಬಿಡಾಡಿ ಹಸುಗಳು ರಾಜ್ಯದಲ್ಲಿವೆ.