ವರವರ ರಾವ್‌ಗೆ ಜೀವನ ಹಕ್ಕನ್ನು ನಿರಾಕರಿಸಲು ಎಲ್ಗಾರ್ ಪರಿಷದ್ ಪ್ರಕರಣ ಎಂಬ ಪಿತೂರಿ: ಪಿಯುಡಿಆರ್

Update: 2020-11-19 14:57 GMT

ಹೊಸದಿಲ್ಲಿ,ನ.19: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಬಂಧಿಸಲ್ಪಟ್ಟಿರುವ ತೆಲುಗು ಕವಿ ಹಾಗೂ ಸಾಮಾಜಿಕ ಹೋರಾಟಗಾರ ವರವರ ರಾವ್ (82) ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಪೀಪಲ್ಸ್ ಯೂನಿಯನ್ ಆಫ್ ಡೆಮಾಕ್ರಟಿಕ್ ರೈಟ್ಸ್ (ಪಿಯುಡಿಆರ್) ಗುರುವಾರ ಆಗ್ರಹಿಸಿದೆ. 2017ರ ಎಲ್ಗಾರ್ ಪರಿಷದ್ ಕುರಿತು ಕೇಂದ್ರದ ತನಿಖೆಯು ರಾವ್ ಅವರ ಜೀವನದ ಹಕ್ಕನ್ನು ಕಡೆಗಣಿಸುವ ಮತ್ತು ಘನತೆಯಿಂದ ಬದುಕುವ ಅವರ ಮಾನವ ಹಕ್ಕನ್ನು ಕಿತ್ತುಕೊಳ್ಳುವ ಉದ್ದೇಶದ ಪಿತೂರಿಯಾಗಿದೆ ಎಂದು ಅದು ಹೇಳಿದೆ.

2017,ಡಿ.31ರಂದು ಪುಣೆಯ ಶನಿವಾರವಾಡಾದಲ್ಲಿ ನಡೆದಿದ್ದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದ ಆರೋಪದಲ್ಲಿ ರಾವ್ ಅವರನ್ನು 2018,ನ.17ರಂದು ಬಂಧಿಸಲಾಗಿತ್ತು. ಇದಕ್ಕೂ ಮುನ್ನ ಹಲವಾರು ದಿನಗಳ ಕಾಲ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಅವರು ಈಗಾಗಲೇ 732 ದಿನಗಳನ್ನು ಬಂಧನದಲ್ಲಿ ಕಳೆದಿದ್ದಾರೆ,ವಿಚಾರಣೆ ಮಾತ್ರ ಇನ್ನೂ ಆರಂಭವಾಗಿಲ್ಲ.

 ರಾವ್ ಹೆಚ್ಚು ಕಡಿಮೆ ಮರಣಶಯ್ಯೆಯಲ್ಲಿರುವುದನ್ನು ಗಮನಿಸಿದ ಬಾಂಬೆ ಉಚ್ಚ ನ್ಯಾಯಾಲಯವು 15 ದಿನಗಳ ಅವಧಿಗೆ ಅವರನ್ನು ತಲೋಜಾ ಜೈಲಿನಿಂದ ಮುಂಬೈನ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಗುರುವಾರ ಆದೇಶಿಸಿದೆ. ನ್ಯಾಯಾಲಯಕ್ಕೆ ಮಾಹಿತಿ ನೀಡದೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಾರದು ಮತ್ತು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಕುಟುಂಬಕ್ಕೆ ಅವಕಾಶ ನೀಡಬೇಕು ಎಂದು ಅದು ನಿರ್ದೇಶ ನೀಡಿದೆ.

ರಾವ್ ಅವರಿಗೆ ಇನ್ನೂ ಜಾಮೀನು ಲಭ್ಯವಾಗಿಲ್ಲ. ತಲೋಜಾ ಜೈಲಿನಲ್ಲಿ ಲಭ್ಯವಿಲ್ಲದ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಹಕ್ಕನ್ನು ಮಾತ್ರ ಅವರಿಗೆ ನೀಡಲಾಗಿದೆ. ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿರುವ ರಾವ್ ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅವಕಾಶವನ್ನು ವಿಫಲಗೊಳಿಸಲು ಸರಕಾರವು ಅಸಮರ್ಪಕ ಮತ್ತು ಅವಸರದಿಂದ ಜೋಡಿಸಲ್ಪಟ್ಟಿದ್ದ ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಸ್ಪಷ್ಟವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಪಿಯುಡಿಆರ್,ಎರಡು ವರ್ಷಗಳಾದರೂ ಪ್ರಕರಣದಲ್ಲಿ ವಿಚಾರಣೆ ಆರಂಭವಾಗಿಲ್ಲ. ಆದರೆ ಜಾಮೀನು ಅರ್ಜಿಗಳನ್ನು ವಿರೋಧಿಸಲು ಸರಕಾರವು ಸಾಕಷ್ಟು ಶಕ್ತಿಯನ್ನು ವ್ಯಯಿಸಿದೆ ಎಂದಿದೆ.

 ರಾವ್ ಅವರನ್ನು ಕರಾಳ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲಾಗಿದ್ದು,ಇದು ಅವರಿಗೆ ಜಾಮೀನು ದೊರೆಯುವುದನ್ನು ಹೆಚ್ಚು ಕಡಿಮೆ ಅಸಾಧ್ಯವಾಗಿಸಿದೆ. ಅವರು ಸಲ್ಲಿಸಿದ್ದ ಐದು ಜಾಮೀನು ಅರ್ಜಿಗಳನ್ನು ಈಗಾಗಲೇ ವಜಾಗೊಳಿಸಲಾಗಿದೆ. ತನ್ಮಧ್ಯೆ ಅವರು ಪ್ರಜ್ಞಾಹೀನರಾಗಿ ಬಿದ್ದಿದ್ದರು,ಕೋವಿಡ್‌ಗೆ ಪಾಸಿಟಿವ್ ಆಗಿದ್ದರು ಹಾಗೂ ಗಂಭೀರ ಚಯಾಪಚಯ ಮತ್ತು ಮಾನಸಿಕ ಅಸಮತೋಲನಗಳಿಂದಲೂ ನರಳಿದ್ದರು ಎಂದು ಪಿಯುಡಿಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News