168 ಜಿಲ್ಲಾ ನ್ಯಾಯಾಧೀಶರ ತಕ್ಷಣ ವರ್ಗಾವಣೆಗೆ ದಿಲ್ಲಿ ಹೈಕೋರ್ಟ್ ಆದೇಶ

Update: 2020-11-19 15:12 GMT

ಹೊಸದಿಲ್ಲಿ,ನ.19: ದಿಲ್ಲಿಯ ಜಿಲ್ಲಾ ನ್ಯಾಯಾಲಯಗಳ 168 ನ್ಯಾಯಾಧೀಶರನ್ನು ತಕ್ಷಣ ವರ್ಗಾವಣೆಗೊಳಿಸಿ ದಿಲ್ಲಿ ಉಚ್ಚ ನ್ಯಾಯಾಲಯವು ಆದೇಶಿಸಿದೆ.

ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿರುವ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ನಡೆಸುತ್ತಿದ್ದ ಹೆಚ್ಚುವರಿ ಮಹಾನಗರ ನ್ಯಾಯಾಧೀಶ ವಿಶಾಲ್ ಪಹುಜಾ ಅವರು ವರ್ಗಾವಣೆಗೊಂಡ ನ್ಯಾಯಾಧೀಶರಲ್ಲಿ ಸೇರಿದ್ದಾರೆ. ಅವರನ್ನು ಸಂಸದರು ಮತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ರಾವುಸ್ ಅವೆನ್ಯು ಜಿಲ್ಲಾ ನ್ಯಾಯಾಲಯದಿಂದ ಕಡಕಡಡೂಮಾ ಜಿಲ್ಲಾ ನ್ಯಾಯಾಲಯಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಬಾಡಿಗೆ ನಿಯಂತ್ರಕರಾಗಿ ವರ್ಗಾಯಿಸಲಾಗಿದೆ.

ದಿಲ್ಲಿ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಮನೋಜ್ ಜೈನ್ ಅವರು ಗುರುವಾರ ಹಾಲಿ ನ್ಯಾಯಾಧೀಶರ ವರ್ಗಾವಣೆಯ ಮತ್ತು 47 ನೂತನ ಮಹಾನಗರ ನ್ಯಾಯಾಧೀಶರ ನಿಯೋಜನೆ ಪಟ್ಟಿಯನ್ನು ಹೊರಡಿಸಿ ಆದೇಶಿಸಿದ್ದರು.

ದಿಲ್ಲಿ ಉಚ್ಚ ನ್ಯಾಯಾಲಯವು ನ.13ರಂದು 16 ನ್ಯಾಯಾಧೀಶರಿಗೆ ಭಡ್ತಿಯನ್ನು ನೀಡಿತ್ತು. ಈಶಾನ್ಯ ದಿಲ್ಲಿ ಹಿಂಸಾಚಾರಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿರುವ ಮುಖ್ಯ ಮಹಾನಗರ ನ್ಯಾಯಾಧೀಶ ಪುರುಷೋತ್ತಮ ಪಾಠಕ್ ಮತ್ತು ಕಳೆದ ಮಾರ್ಚ್‌ನಲ್ಲಿ ನಿಝಾಮುದ್ದೀನ್ ಮರ್ಕಝ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವಿದೇಶಿ ಪ್ರಜೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ಮಹಾನಗರ ನ್ಯಾಯಾಧೀಶರಾದ ಗುರ್ಮೊಹಿನಾ ಕೌರ್ ಅವರು ಪದೋನ್ನತಿಗೊಂಡಿರುವ ಪ್ರಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News