ಮನೆಯ ಛಾವಣಿಗೆ ಅಪ್ಪಳಿಸಿದ ಉಲ್ಕಾಶಿಲೆಯಿಂದ ಕೋಟ್ಯಾಧೀಶನಾದ ವ್ಯಕ್ತಿ !

Update: 2020-11-19 16:06 GMT
 ಫೋಟೊ ಕೃಪೆ:twitter.com

ಜಕಾರ್ತ (ಇಂಡೋನೇಶ್ಯ), ನ. 19: ಇಂಡೋನೇಶ್ಯದ ವ್ಯಕ್ತಿಯೊಬ್ಬರ ಮನೆಯ ಛಾವಣಿಗೆ ಉಲ್ಕಾಶಿಲೆ (ಬಾಹ್ಯಾಕಾಶದಿಂದ ಉದುರಿದ ಕಲ್ಲು) ಅಪ್ಪಳಿಸಿದ ಬಳಿಕ ಅವರು ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧೀಶರಾಗಿದ್ದಾರೆ.

ಸುಮಾತ್ರ ದ್ವೀಪದ ನಿವಾಸಿ 33 ವರ್ಷದ ಜೊಸುವ ಹುಟಗಲುಂಗ್ ಶವಪೆಟ್ಟಿಗೆ ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಅವರು ಉಲ್ಕಾಶಿಲೆಯ ತುಂಡನ್ನು ಸುಮಾರು 9.8 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಹುಟಗಲುಂಗ್ ತನ್ನ ಮನೆಯ ಹೊರಗೆ ಕೆಲಸ ಮಾಡುತ್ತಿದ್ದರು. ಆಗ ಅವರ ಮನೆಯ ಚಾವಡಿಯ ಮೇಲೆ ಮೇಲ್ಛಾವಣಿಗೆ ಹಾಕಲಾಗಿದ್ದ ತಗಡಿನ ಹಾಳೆಯ ಮೂಲಕ 2.1 ಕೆಜಿ ಭಾರದ ಉಲ್ಕಾಶಿಲೆ ಅಪ್ಪಳಿಸಿತು. ಅವರು ಉಲ್ಕಾಶಿಲೆ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದರು.

ಈ ಉಲ್ಕಾಶಿಲೆ ಸುಮಾರು 450 ಕೋಟಿ ವರ್ಷಗಳ ಹಿಂದಿನ ಅತ್ಯಂತ ಅಪರೂಪದ ವಸ್ತು ಎಂದು ‘ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

ಅವರು ಈಗ ಉಲ್ಕಾಶಿಲೆ ಅಮೆರಿಕದ ಜ್ಯಾರೆಡ್ ಕಾಲಿನ್ಸ್‌ಗೆ ಮಾರಾಟ ಮಾಡಿದ್ದಾರೆ. ಕಾಲಿನ್ಸ್ ಅದನ್ನು ಜೇ ಪಿಯಾಟೆಕ್ ಎಂಬವರಿಗೆ ಮಾರಾಟ ಮಾಡಿದ್ದಾರೆ. ಅವರು ಅದನ್ನು ಆ್ಯರಿಝೋನ ರಾಜ್ಯ ವಿಶ್ವವಿದ್ಯಾನಿಲಯದ ಉಲ್ಕಾಶಿಲೆ ಅಧ್ಯಯನ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News