ನ್ಯಾಯದ ನಿರೀಕ್ಷೆಯಲ್ಲಿ ದೃಷ್ಟಿ ಕಳೆದುಕೊಂಡ ಯುವಕ: ರಾಜಾರೋಷವಾಗಿ ತಿರುಗುತ್ತಿರುವ ಹಲ್ಲೆಕೋರ
ಹೊಸದಿಲ್ಲಿ: ಈ ವರ್ಷದ ಫೆಬ್ರವರಿ 24ರಂದು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ 22 ವರ್ಷದ ಶಾರುಖ್ ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ಉದ್ರಿಕ್ತ ಗುಂಪೊಂದು ಶಿವ್ ವಿಹಾರ್ ತಿರಾಹ ಪಕ್ಕ ತಡೆದಿತ್ತು. ನಂತರ ಆ ಗುಂಪು ಶಾರುಖ್‍ನನ್ನು ವಾಹನದಿಂದ ಹೊರಗೆಳೆದು ಆತನಿಗೆ ಪ್ರಜ್ಞೆ ತಪ್ಪುವ ತನಕ ಹಲ್ಲೆ ನಡೆಸಿ ಅಲ್ಲಿಂದ ತೆರಳಿತ್ತು. "ಉದ್ರಿಕ್ತರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಹಲ್ಲೆ ನಡೆಸಿದ್ದರು,'' ಎಂದು ಶಾರುಖ್ ಫೆಬ್ರವರಿಯ ದಿಲ್ಲಿ ಹಿಂಸಾಚಾರ ಪ್ರಕರಣ ಸಂದರ್ಭ ತಮ್ಮ ಮೇಲಾದ ಭಯಾನಕ ದೌರ್ಜನ್ಯವನ್ನು ನೆನಪಿಸುತ್ತಾರೆ. ಘಟನೆಯಲ್ಲಿ ದೃಷ್ಟಿ ಕಳೆದುಕೊಂಡ ಶಾರುಖ್ ಗೆ ಹಲ್ಲೆ ನಡೆಸಿದ ದುಷ್ಕರ್ಮಿಯ ಬಂಧನ ಇನ್ನೂ ಆಗಿಲ್ಲ ಎಂದು ಕುಟುಂಬ ಆರೋಪಿಸಿದೆ ಎಂದು thewire.in ವರದಿ ಮಾಡಿದೆ.
ಅವರ ಸೋದರ ಹಾಗೂ ಕುಟುಂಬ ಆ ದಿನ ಅವರಿಗಾಗಿ ಆತಂಕದಿಂದ ಹುಡುಕಾಡುತ್ತಿದ್ದಾಗ ಶಾರುಖ್ ಸೋದರ ಮೊಬೈಲಿಗೆ ಬಂದ ವೀಡಿಯೋವೊಂದರಲ್ಲಿ ಶಾರುಖ್ ಮೇಲೆ ನಡೆದ ದಾಳಿಯ ವೀಡಿಯೋವನ್ನು ಯಾರೋ ಕಳುಹಿಸಿದ್ದರು. ಶಾರುಖ್ ಅವರು ರಾಜಧಾನಿಯ ತೇಜ್ ಬಹಾದುರ್ ಆಸ್ಪತ್ರೆಯಲ್ಲಿದ್ದಾರೆಂದು ಕುಟುಂಬಕ್ಕೆ ಮರುದಿನವಷ್ಟೇ ತಿಳಿದು ಬಂದಿತ್ತು. ಆದರೆ ಅಲ್ಲಿಗೆ ತೆರಳಿದಾಗ ಆತನನ್ನು ಆಸ್ಪತ್ರೆಗೆ ದಾಖಲಿಸಲು ಯಾರೂ ಬಂದಿಲ್ಲವೆಂದು ಆತನನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ನಂತರ ಕುಟುಂಬದ ಪ್ರಯತ್ನದ ಫಲವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬರೋಬ್ಬರಿ 17 ದಿನಗಳ ನಂತರ ಆತನಿಗೆ ಪ್ರಜ್ಞೆ ಬಂದಿತ್ತು.
ಆ ದಿನ ನಡೆದ ಭಯಾನಕ ಹಲ್ಲೆಯಿಂದಾಗಿ ಬಟ್ಟೆ ಮಾರಾಟಗಾರನಾಗಿ ಕುಟುಂಬಕ್ಕೆ ಆಧಾರವಾಗಿದ್ದ ಶಾರುಖ್‍ಗೆ ಎಡ ಕಣ್ಣಿನ ದೃಷ್ಟಿ ನಾಶವಾಗಿದ್ದರೆ ಬಲಗಣ್ಣಿನಿಂದ ಅಲ್ಪಸ್ವಲ್ಪ ಕಾಣುತ್ತದೆ. ಹಲ್ಲೆ ಸಂದರ್ಭ ಅವರಿಗೆ ಗುಂಡೇಟು ಕೂಡ ತಗಲಿತ್ತು ಹಾಗೂ ಗುಂಡು ಆತನ ಎದೆಗೆ ನಾಟಿತ್ತು.
"ಈಗ ನನಗೆ ಏನೂ ಮಾಡಲು ಸಾಧ್ಯವಿಲ್ಲ, ಎಲ್ಲವೂ ಕತ್ತಲು. ದಿನವಿಡೀ ಹಾಗೆಯೇ ಕಾಲ ಕಳೆಯುತ್ತೇನೆ, ನಮಾಝ್ ಒಂದೇ ನನಗೆ ಶಾಂತಿ ನೀಡುತ್ತದೆ" ಎಂದು ಅವರು ಹೇಳುತ್ತಾರೆ.
ಶಾರುಖ್ ಮೇಲೆ ನಡೆದ ಹಲ್ಲೆ ಘಟನೆಯ ವೀಡಿಯೋದಲ್ಲಿ ದಾಳಿಕೋರನೊಬ್ಬನ ಗುರುತು ಚೆನ್ನಾಗಿ ಕಾಣುತ್ತದೆ ಆದರೆ ಇನ್ನೂ ಆತನ ಬಂಧನವಾಗಿಲ್ಲ. ಅವರಲ್ಲೊಬ್ಬಾತ ಶಿವ್ ವಿಹಾರ್ ನಲ್ಲಿನ ಮೆಡಿಕಲ್ ಸ್ಟೋರ್ ಮಾಲಕ. ಆತ ಏನೂ ನಡೆದೇ ಇಲ್ಲದಂತೆ ಇದ್ದಾನೆ ಎಂದು ಕುಟುಂಬ ಆರೋಪಿಸಿದೆ.
ಕರವಾಲ್ ನಗರ್ ಪೊಲೀಸ್ ಠಾಣೆಯ ಎಸ್‍ಐ ಈ ಘಟನೆ ಕುರಿತು ಪ್ರತಿಕ್ರಿಯಿಸಿ, ನನಗೆ ಈ ಕೇಸ್ ಹಸ್ತಾಂತರಿಸಿದ ಸಂದರ್ಭ ಕೇಸ್ ಫೈಲ್ ಪೂರ್ಣಗೊಂಡಿರಲಿಲ್ಲ, ಅದೀಗ ಪೂರ್ಣಗೊಂಡಿದೆ. ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದಿದ್ದಾರೆ.
ಶಾರುಖ್ ಕುಟುಂಬ ಘಟನೆ ನಡೆದಂದಿನಿಂದ ಜರ್ಝರಿತವಾಗಿದೆ. ಅವರ ತಂದೆ ಈ ಹಿಂದೆಯೇ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ದಿಲ್ಲಿ ಸರಕಾರದಿಂದ ಸ್ವಲ್ಪ ಪರಿಹಾರ ಸಿಕ್ಕಿದೆ ಆದರೆ ನಮಗೆ ನ್ಯಾಯ ಬೇಕಿದೆ ಎಂದು ಕುಟುಂಬ ಹೇಳುತ್ತಿದೆ ಹಾಗೂ ದಾಳಿಕೋರರಿಗೆ ಶಿಕ್ಷೆಯಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.