ಒಂದಲ್ಲ, 2 ಬಾರಿ ಡೈನೊಸಾರ್‌ಗಳ ಸರ್ವನಾಶ

Update: 2020-11-20 18:26 GMT

ಪ್ಯಾರಿಸ್, ನ. 20: ಸುಮಾರು 6.6 ಕೋಟಿ ವರ್ಷಗಳ ಹಿಂದೆ ಪ್ಯಾರಿಸ್ ನಗರದ ದುಪ್ಪಟ್ಟು ವ್ಯಾಸ ಹೊಂದಿದ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದಾಗ ಭೂಮಿಯಲ್ಲಿ ವಾಸಿಸುತ್ತಿದ್ದ ಡೈನೊಸಾರ್‌ಗಳು ಸರ್ವನಾಶವಾದವು ಎಂಬುದಾಗಿ ಹೆಚ್ಚಿನವರು ತಿಳಿದಿದ್ದಾರೆ.

ಸ್ಫೋಟದಿಂದ ಸೃಷ್ಟಿಯಾದ ಬೃಹತ್ ಬೆಂಕಿಯುಂಡೆಗಳಿಂದ ಡೈನೊಸಾರ್‌ಗಳು ನಾಶವಾಗದಿದ್ದರೂ, ಜಾಗತಿಕ ಉಷ್ಣತೆಯಲ್ಲಿನ ತೀವ್ರ ಕುಸಿತದಿಂದಾಗಿ ಅವುಗಳು ಪ್ರಾಣ ಕಳೆದುಕೊಂಡವು. ಕ್ಷುದ್ರಗ್ರಹದ, ಶಾಖವನ್ನು ತಡೆಗಟ್ಟುವ ಅವಶೇಷಗಳು ವಾತಾವರಣದಲ್ಲಿ ಹರಡಿದಾಗ ಸೂರ್ಯನ ಬಿಸಿಲು ಭೂಮಿಯನ್ನು ತಲುಪದೆ ಭೂಮಿ ಶೀತಲ ಪ್ರದೇಶವಾಗಿ ಮಾರ್ಪಟ್ಟಿತು.

17.9 ಕೋಟಿಗೂ ಹೆಚ್ಚಿನ ವರ್ಷಗಳ ಹಿಂದೆ, ಭೂಮಿಯ ಪರಿಸರವನ್ನು ಬದಲಿಸಿದ ಇನ್ನೊಂದು ವಿದ್ಯಮಾನವು ಇನ್ನೊಂದು ಗುಂಪಿನ ಡೈನೊಸಾರ್ ತಳಿಯನ್ನು ಸರ್ವನಾಶಗೊಳಿಸಿತು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಈ ಬಾರಿ ಡೈನೊಸಾರ್‌ಗಳನ್ನು ನಾಶಗೊಳಿಸಿದ್ದು ಜಾಗತಿಕ ಅತಿ ಉಷ್ಣತೆ. ಭೂಮಿ ವೇಗವಾಗಿ ಬಿಸಿಯಾಗತೊಡಗಿದಾಗ ಅದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಡೈನೊಸಾರ್‌ಗಳು ಪ್ರಾಣ ಕಳೆದುಕೊಂಡವು.

ಈ ವಿದ್ಯಮಾನಕ್ಕೆ ಸಂಬಂಧಿಸಿ ಪುರಾವೆಗಳನ್ನು ವಿಜ್ಞಾನಿಗಳು ಅಜೇಂಟೀನದ ಪ್ಯಾಟಗೋನಿಯದಲ್ಲಿ ಕಂಡುಬಂದ ಸಸ್ಯಗಳ ಪಳೆಯುಳಿಕೆಗಳಲ್ಲಿ ಪತ್ತೆಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News