ತ್ರಿಪುರಾ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ; ಪೊಲೀಸ್ ಗೋಲಿಬಾರ್ ಗೆ ಓರ್ವ ಬಲಿ, ಹಲವರಿಗೆ ಗಾಯ

Update: 2020-11-21 14:55 GMT

ಗುವಾಹಟಿ,ನ.21: ಬ್ರು ನಿರಾಶ್ರಿತರ ಪುನರ್ವಸತಿಯನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಬಂದ್ ಅನ್ನು ಬೆಂಬಲಿಸಿ ಶನಿವಾರ ಉತ್ತರ ತ್ರಿಪುರಾದ ಪಣಿಸಾಗರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದ ಬಳಿಕ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಓರ್ವ ವ್ಯಕ್ತಿಯು ಮೃತಪಟ್ಟಿದ್ದು,ಹಲವಾರು ಜನರು ಗಾಯಗೊಂಡಿದ್ದಾರೆ. ಐವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಪ್ರತಿಭಟನೆ ತೀವ್ರವಾಗಿರುವ ಸ್ಥಳಗಳಿಗೆ ಹೆಚ್ಚಿನ ಪೊಲೀಸ್ ಪಡೆಗಳನ್ನು ರವಾನಿಸಲಾಗಿದೆ.

ಪ್ರತಿಭಟನಾಕಾರರು ಕಲ್ಲುತೂರಾಟವನ್ನು ಆರಂಭಿಸಿ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ವಾಹನಗಳ ಸಂಚಾರಕ್ಕೆ ತಡೆಯನ್ನುಂಟು ಮಾಡಿದ ಹಿನ್ನೆಲೆಯಲ್ಲಿ ಗೋಲಿಬಾರ್ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

 ಗುಂಡಿನೇಟಿನಿಂದ ಶ್ರೀಕಾಂತ ದಾಸ್ (45) ಎಂಬಾತ ಮೃತಪಟ್ಟಿದ್ದು,ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ದೃಢಪಡಿಸಿದವು. ಪ್ರತಿಭಟನಾಕಾರರು ಪೊಲೀಸರ ವಿರುದ್ಧ ದಾಳಿಯನ್ನು ನಡೆಸಿದ್ದರು ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯೋರ್ವ ಮೃತಪಟ್ಟಿದ್ದಾನೆಂದು ಸ್ಥಳೀಯ ಮೂಲಗಳು ತಿಳಿಸಿವೆಯಾದರೂ,ಪೊಲೀಸರು ಇನ್ನಷ್ಟೇ ಅದನ್ನು ದೃಢಪಡಿಸಬೇಕಿದೆ.

 ಮಿಝೋರಾಮ್‌ನಿಂದ ಸುಮಾರು 35,000 ಬುಡಕಟ್ಟು ಬ್ರು ನಿರಾಶ್ರಿತರನ್ನು ತ್ರಿಪುರಾದಲ್ಲಿ ಪುನರ್ವಸತಿಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ನ.16ರಿಂದ ನಡೆಯುತ್ತಿರುವ ಬಂದ್ ಉದ್ವಿಗ್ನತೆಯನ್ನು ಸೃಷ್ಟಿಸಿದೆ ಮತ್ತು ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಸೋಮವಾರದಿಂದ ವಿದ್ಯಾರ್ಥಿಗಳು,ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 12,000ದಿಂದ 15,000 ಪ್ರತಿಭಟನಾಕಾರರು ನಿಷೇಧಾಜ್ಞೆಗಳನ್ನು ಉಲ್ಲಂಘಿಸಿ ಸರಕಾರಿ ಕಚೇರಿಗಳು ಮತ್ತು ಮಾರುಕಟ್ಟೆಗಳ ಎದುರು ರ್ಯಾಲಿಗಳು ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

 23 ವರ್ಷಗಳ ಹಿಂದೆ, 1997 ಅಕ್ಟೋಬರ್‌ನಲ್ಲಿ ತ್ರಿಪುರಾದಲ್ಲಿ ಜನಾಂಗೀಯ ಘರ್ಷಣೆಗಳ ಬಳಿಕ ಸಾವಿರಾರು ಬ್ರು ಬುಡಕಟ್ಟು ಜನರು ನೆರೆಯ ಮಿಝೋರಾಮ್‌ಗೆ ಪರಾರಿಯಾಗಿದ್ದರು. ನಿರಾಶ್ರಿತರ ಶಿಬಿರಗಳಿಂದ ಅವರನ್ನು ಪುನರ್ವಸತಿಗೊಳಿಸುವ ಗೃಹಸಚಿವ ಅಮಿತ್ ಶಾ ಅವರ ನೆಚ್ಚಿನ ಯೋಜನೆಯನ್ನು ಈಶಾನ್ಯ ರಾಜ್ಯಗಳಲ್ಲಿ ನರೇಂದ್ರ ಮೋದಿ ಸರಕಾರದ ಪ್ರಮುಖ ಯಶಸ್ಸು ಎಂದು ಪರಿಗಣಿಸಲಾಗುತ್ತಿದೆ. ಆದರೆ ಸ್ಥಳೀಯರು ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News