ಭಯೋತ್ಪಾದನೆಯನ್ನು ಬೆಂಬಲಿಸುವ ನೀತಿ ಕೈಬಿಡಬೇಕು: ಪಾಕಿಸ್ತಾನಕ್ಕೆ ಭಾರತದ ಎಚ್ಚರಿಕೆ

Update: 2020-11-21 14:47 GMT

ಹೊಸದಿಲ್ಲಿ,ನ.21: ಇಲ್ಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯ ಚಾರ್ಜ್ ಡಿ ಅಫೇರ್ಸ್ ಅಫ್ತಾಬ್ ಹುಸೇನ್ ಖಾನ್ ಅವರನ್ನು ಶನಿವಾರ ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸಲು ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ವಿಫಲ ಯತ್ನದ ಕುರಿತು ತನ್ನ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿತು. ಗುರುವಾರ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಗ್ರೋತಾ ಬಳಿ ಟ್ರಕ್ಕಿನಲ್ಲಿ ಬಚ್ಚಿಟ್ಟುಕೊಂಡು ಪ್ರಯಾಣಿಸುತ್ತಿದ್ದ ನಾಲ್ವರು ಜೈಷ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಮೂರು ಗಂಟೆಗಳ ಗುಂಡಿನ ಕಾಳಗದ ಬಳಿಕ ಹೊಡೆದುರುಳಿಸಿದ್ದವು.

ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ತನ್ನ ನೀತಿಯನ್ನು ಕೈಬಿಡಬೇಕು ಹಾಗೂ ಇತರ ದೇಶಗಳಲ್ಲಿ ದಾಳಿಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆಗಳು ಸ್ಥಾಪಿಸಿರುವ ಮೂಲಸೌಕರ್ಯಗಳನ್ನು ನಾಶಗೊಳಿಸಬೇಕು ಎಂದು ಸಚಿವಾಲಯವು ಖಾನ್ ಅವರನ್ನು ಆಗ್ರಹಿಸಿತು.

ಭೀತಿವಾದದ ವಿರುದ್ಧ ಹೋರಾಟದಲ್ಲಿ ತನ್ನ ರಾಷ್ಟ್ರೀಯ ಭದ್ರತೆಯ ಕಾಯ್ದುಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸರಕಾರವು ಕಟಿಬದ್ಧವಾಗಿದೆ ಎಂದು ಅದು ಸ್ಪಷ್ಟಪಡಿಸಿತು.

ನಗ್ರೋತಾದಲ್ಲಿ ನಾಲ್ವರು ಭಯೋತ್ಪಾದಕರನ್ನು ಕೊಲ್ಲುವ ಮೂಲಕ ಭದ್ರತಾ ಪಡೆಗಳು ದೊಡ್ಡ ಭಯೋತ್ಪಾದಕ ದಾಳಿಯ ಸಂಚನ್ನು ವಿಫಲಗೊಳಿಸಿವೆ. ಹತ ವ್ಯಕ್ತಿಗಳು ವಿಶ್ವಸಂಸ್ಥೆ ಮತ್ತು ಹಲವಾರು ರಾಷ್ಟ್ರಗಳಿಂದ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲ್ಪಟ್ಟಿರುವ ಪಾಕಿಸ್ತಾನದ ಜೈಷೆ ಮುಹಮ್ಮದ್‌ಗೆ ಸೇರಿದವರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಅವರಿಂದ ವಶಪಡಿಸಿಕೊಳ್ಳಲಾಗಿರುವ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು,ಮದ್ದುಗುಂಡುಗಳು ಮತ್ತು ಸ್ಫೋಟಕಗಳು ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಅಸ್ಥಿರಗೊಳಿಸಲು,ನಿರ್ದಿಷ್ಟವಾಗಿ ಅಲ್ಲಿ ನಡೆಯುತ್ತಿರುವ ಸ್ಥಳೀಯ ಜಿಲ್ಲಾಭಿವೃದ್ಧಿ ಮಂಡಳಿಗಳ ಚುನಾವಣೆಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಹಳಿತಪ್ಪಿಸಲು ಬೃಹತ್ ಭಯೋತ್ಪಾದಕ ದಾಳಿಗೆ ಸಂಚು ನಡೆದಿತ್ತು ಎನ್ನುವುದನ್ನು ಬೆಟ್ಟು ಮಾಡಿವೆ. ಭಾರತದ ವಿರುದ್ಧ ಜೈಷ್‌ನಿಂದ ನಿರಂತರ ಭಯೋತ್ಪಾದಕ ದಾಳಿಗಳ ಕುರಿತು ಭಾರತವು ತನ್ನ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಭಾರತದ ವಿರುದ್ಧ ಯಾವುದೇ ರೀತಿಯಲ್ಲಿ ಭಯೋತ್ಪಾದನೆಗೆ ತನ್ನ ನೆಲವನ್ನು ಬಳಸಿಕೊಳ್ಳಲು ಅವಕಾಶ ನೀಡದಿರುವ ತನ್ನ ಅಂತರ್ ರಾಷ್ಟ್ರೀಯ ಬಾಧ್ಯತೆಗಳು ಮತ್ತು ದ್ವಿಪಕ್ಷೀಯ ಬದ್ಧತೆಗಳನ್ನು ಈಡೇರಿಸಬೇಕು ಎಂದು ಪಾಕಿಸ್ತಾನಕ್ಕೆ ಭಾರತದ ದೀರ್ಘಕಾಲಿಕ ಆಗ್ರಹವನ್ನು ಖಾನ್ ಅವರಿಗೆ ನೆನಪಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.

 ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಭಯೋತ್ಪಾದಕ ದಾಳಿಯನ್ನು ನಡೆಸುವ ಪಾಕಿಸ್ತಾನದ ಜೈಷ್‌ನ ಸಂಚನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದರು. ಇದನ್ನು ತಿರಸ್ಕರಿಸಿದ್ದ ಪಾಕಿಸ್ತಾನವು,ಇದು ಅಂತರ್ ರಾಷ್ಟ್ರೀಯ ಗಮನವನ್ನು ಜಮ್ಮು-ಕಾಶ್ಮೀರದಲ್ಲಿಯ ಸ್ಥಿತಿಯಿಂದ ಬೇರೆಡೆಗೆ ತಿರುಗಿಸುವ ಭಾರತದ ಹತಾಶ ಯತ್ನಗಳ ಭಾಗವಾಗಿದೆ ಎಂದು ಹೇಳಿತ್ತು. ಭಾರತವು ಪಾಕಿಸ್ತಾನದಲ್ಲಿ ಸರಕಾರಿ ಪ್ರಾಯೋಜಿತ ಭೀತಿವಾದದಲ್ಲಿ ತೊಡಗಿದೆ ಎಂದು ಪಾಕ್‌ನ ವಿದೇಶಾಂಗ ಕಚೇರಿಯು ಹೇಳಿಕೆಯಲ್ಲಿ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News