ಭಾರತವು ಬದಲಾವಣೆಯ ಮಹತ್ವದ ಹಂತದಲ್ಲಿದೆ, ಮುಂದಿನ 25 ವರ್ಷಗಳು ನಿರ್ಣಾಯಕ: ಪ್ರಧಾನಿ

Update: 2020-11-21 15:15 GMT

ಗಾಂಧಿನಗರ,ನ.21: ದೇಶದ ನೂರನೇ ಸ್ವಾತಂತ್ರ್ಯ ದಿನಾಚರಣೆಗೆ ಶನಿವಾರ ಪೀಠಿಕೆ ಹಾಕಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವು ಬದಲಾವಣೆಯ ಮಹತ್ವದ ಹಂತದಲ್ಲಿ ಸಾಗುತ್ತಿದೆ ಮತ್ತು ಮುಂದಿನ 25 ವರ್ಷಗಳು ದೇಶದ ಪಾಲಿಗೆ ನಿರ್ಣಾಯಕವಾಗಿರಲಿವೆ ಎಂದು ಹೇಳಿದರು.

ಇಲ್ಲಿಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಪೆಟ್ರೋಲಿಯಂ ವಿವಿಯ ಘಟಿಕೋತ್ಸವದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ,ಇಂದಿನ ಭಾರತವು ಬದಲಾವಣೆಯ ಮಹತ್ವದ ಹಂತದ ಮೂಲಕ ಸಾಗುತ್ತಿದೆ. ದೇಶದ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ನಿಮ್ಮದಾಗಿದೆ. ಒಂದು ಕ್ಷಣ ಯೋಚಿಸಿ,ನಾವು ಸುವರ್ಣ ಯುಗದಲ್ಲಿ ಬದುಕುತ್ತಿದ್ದೇವೆ. ಈ ಬಗ್ಗೆ ನೀವು ಚಿಂತನೆ ಮಾಡಿರದಿರಬಹುದು,ಆದರೆ ನೀವು ಸುವರ್ಣ ಯುಗದಲ್ಲಿರುವುದು ಹೌದು ಎಂದರು.

ಭಾರತವು 2022ನೇ ಇಸ್ವಿಯಲ್ಲಿ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಲಿದೆ ಮತ್ತು 2047ರಲ್ಲಿ ನಾವು ಸ್ವಾತಂತ್ರ್ಯದ ನೂರು ವರ್ಷಗಳನ್ನು ಪೂರೈಸಲಿದ್ದೇವೆ. ಅಂದರೆ ಈ 25 ವರ್ಷಗಳು ಅತ್ಯಂತ ಮುಖ್ಯವಾಗಿವೆ. ಭಾರತದ ಅತ್ಯಂತ ಮುಖ್ಯ 25 ವರ್ಷಗಳು ನಿಮ್ಮ ಬದುಕಿನ ಮುಖ್ಯ ವರ್ಷಗಳೂ ಆಗಿರಲಿವೆ ಎಂದ ಮೋದಿ,ಹೊಣೆಗಾರಿಕೆಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಜನರು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ತಿಳಿಸಿದರು.

ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆಯೂ ಮಾತನಾಡಿದ ಪ್ರಧಾನಿ,ಪರಿಸ್ಥಿತಿ ಸುಧಾರಿಸುವ ಆಶಯವನ್ನು ವ್ಯಕ್ತಪಡಿಸಿದರು.

 ವಿಶ್ವದಾದ್ಯಂತ ಮಹತ್ವದ ಬದಲಾವಣೆಗಳಾಗುತ್ತಿವೆ ಮತ್ತು ಉದ್ಯಮಶೀಲತೆ ಹಾಗೂ ಉದ್ಯೋಗಾವಕಾಶಗಳ ಅಭಿವೃದ್ಧಿಗೆ ಹಲವಾರು ಅವಕಾಶಗಳಿವೆ. ವಿಶ್ವವು ಇಂತಹ ಬೃಹತ್ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಪದವೀಧರರಾಗಿ ಹೊರಬೀಳುವುದು ಸುಲಭವಲ್ಲ. ಆದರೆ ನಿಮ್ಮ ಸಾಮರ್ಥ್ಯಗಳು ಈ ಸವಾಲುಗಳಿಗಿಂತ ಹೆಚ್ಚು ಪ್ರಬಲವಾಗಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News