ಹತ್ರಸ್ ಅತ್ಯಾಚಾರ, ಹತ್ಯೆ ಪ್ರಕರಣ: ಯುವತಿಯ ಕುಟುಂಬ ಗೃಹಬಂಧನದ ಸ್ಥಿತಿಯಲ್ಲಿ ಜೀವಿಸುತ್ತಿದೆ; ಪಿಯುಸಿಎಲ್

Update: 2020-11-21 17:00 GMT

ಲಕ್ನೋ, ನ. 21: ಹತ್ರಸ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಯುವತಿಯ ಕುಟುಂಬ ಗೃಹಬಂಧನದ ಸ್ಥಿತಿಯಲ್ಲಿ ಜೀವಿಸುತ್ತಿದೆ. ಸಿಆರ್‌ಪಿಎಫ್ ಭದ್ರತೆ ಹಿಂದೆ ತೆಗೆದುಕೊಂಡ ಬಳಿಕ ಅವರು ಭೀತಿಯಿಂದ ಬದುಕುತ್ತಿದ್ದಾರೆ ಎಂದು ನಾಗರಿಕ ಹಕ್ಕುಗಳ ಸಂಘಟನೆ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್) ಶನಿವಾರ ಆರೋಪಿಸಿದೆ.

 ಪ್ರಕರಣದ ತನಿಖೆಯ ಸ್ಥಿತಿಗತಿಯ ಬಗೆಗಿನ ವರದಿಯನ್ನು ಬಿಡುಗಡೆ ಮಾಡಿರುವ ಪಿಯುಸಿಎಲ್, ಕುಟುಂಬಕ್ಕೆ ರಕ್ಷಣೆ ನೀಡುವಂತೆ ಹಾಗೂ ನಿರ್ಭಯಾ ನಿಧಿ ಮೂಲಕ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿದೆ.

ಸಂಪೂರ್ಣ ಕುಟುಂಬ ಗೃಹಬಂಧನದ ಸ್ಥಿತಿಯಲ್ಲಿ ಜೀವಿಸುತ್ತಿದೆ. ಅವರ ಸಾಮಾನ್ಯ ಸಾಮಾಜಿಕ ಜೀವನಕ್ಕೆ ಅಡ್ಡಿ ಉಂಟಾಗಿದೆ ಎಂದು ಪಿಯುಸಿಎಲ್‌ನ ಸದಸ್ಯ ಕಮಲ್ ಸಿಂಗ್, ಪಾರ್ಮಾನ್ ನಖ್ವಿ, ಅಲೋಕ್ ಶಶಿಕಾಂತ್ ಹಾಗೂ ಕೆ.ಬಿ. ಮೌರ್ಯಾ ಹೇಳಿದ್ದಾರೆ.

ಸಿಆರ್‌ಪಿಎಫ್ ಭದ್ರತೆ ಹಿಂಪಡೆದ ಬಳಿಕ ಯುವತಿಯ ಕುಟುಂಬದ ಸದಸ್ಯರು ಜೀವ ಭಯದಿಂದ ಬದುಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಯುವತಿಯ ಮೃತದೇಹವನ್ನು ಅವಸರದಿಂದ ಅಂತ್ಯಕ್ರಿಯೆ ನಡೆಸಿರುವುದಕ್ಕೆ ಸಂಬಂಧಿಸಿ ಜಿಲ್ಲಾ ದಂಡಾಧಿಕಾರಿ ಪ್ರವೀಣ್ ಕುಮಾರ್, ಎಸ್.ಪಿ. ವಿಕ್ರಮ್ ವೀರ್ ಹಾಗೂ ಇಲ್ಲಿನ ಎಸ್‌ಎಚ್‌ಒ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News