ಕೊರೋನ ರೋಗಿಗಳಿಗೆ ಅತಿಯಾದ ಶುಲ್ಕ ವಿಧಿಸಿದ ಖಾಸಗಿ ಆಸ್ಪತ್ರೆಗಳು: ಸಂಸದೀಯ ಸಮಿತಿ

Update: 2020-11-21 17:13 GMT

ಹೊಸದಿಲ್ಲಿ, ನ. 21: ಕೊರೋನ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಹಾಗೂ ಕೊರೋನ ಸೋಂಕಿನ ಚಿಕಿತ್ಸೆಗೆ ನಿರ್ದಿಷ್ಟ ಮಾರ್ಗಸೂಚಿಗಳು ಇಲ್ಲದೇ ಇದ್ದುದರಿಂದ ಖಾಸಗಿ ಆಸ್ಪತ್ರೆಗಳು ಮಿತಿ ಮೀರಿದ ಶುಲ್ಕ ವಿಧಿಸಿವೆ ಎಂದು ಸಂಸದೀಯ ಸಮಿತಿ ಶನಿವಾರ ಹೇಳಿದೆ.

ಸುಸ್ಥಿರ ಬೆಲೆ ಮಾದರಿ ಅಳವಡಿಸಿದ್ದರೆ ಹಲವು ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಸಮಿತಿ ಪ್ರತಿಪಾದಿಸಿದೆ.

ಆರೋಗ್ಯಕ್ಕಿರುವ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಮ್ ಗೋಪಾಲ್ ಯಾದವ್ ‘ಸಾಂಕ್ರಾಮಿಕ ರೋಗ ಕೊರೋನ-19 ಹರಡುವಿಕೆ ಹಾಗೂ ಅದರ ನಿಯಂತ್ರಣ’ ಕುರಿತು ರಾಜ್ಯ ಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಭಾರತದಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ತುಂಬಾ ಕಡಿಮೆ. ದುರ್ಬಲ ಆರೋಗ್ಯ ಮೂಲ ಸೌಕರ್ಯ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸಲು ಇರುವ ದೊಡ್ಡ ಅಡ್ಡಿ ಎಂದು ಸಮಿತಿ ಹೇಳಿದೆ.

ಆದುದರಿಂದ ಸಾರ್ವಜನಿಕ ಆರೋಗ್ಯ ಸೇವೆ ವ್ಯವಸ್ಥೆಯಲ್ಲಿ ಹೂಡಿಕೆ ಹೆಚ್ಚಿಸಲು ಹಾಗೂ ನಿಗದಿಪಡಿಸಲಾದ 2025 ಸಮಯ ಮಿತಿ ದೂರ ಇರುವುದರಿಂದ ಎರಡು ವರ್ಷಗಳ ಒಳಗೆ ಜಿಡಿಪಿಯ ಶೇ. 2.5 ಅನ್ನು ಆರೋಗ್ಯ ಕ್ಷೇತ್ರದಲ್ಲಿ ವೆಚ್ಚ ಮಾಡುವ ಗುರಿ ಹೊಂದಿರುವ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಸಾಧಿಸಲು ನಿರಂತರ ಪ್ರಯತ್ನಿಸಬೇಕು. ಅದುವರೆಗೆ ಆರೋಗ್ಯ ಸೇವೆ ಅಪಾಯಕ್ಕೆ ಸಿಲುಕಬಾರದು ಎಂದು ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ ಎಂದು ಸಮಿತಿ ಹೇಳಿದೆ. ಸಂಪೂರ್ಣ ಜನಸಂಖ್ಯೆಗೆ ಕೊರೋನ ರೋಗದ ವಿರುದ್ಧ ಚುಚ್ಚು ಮದ್ದು ನೀಡಬೇಕು ಹಾಗೂ ಈ ಲಸಿಕೆ ಕಾಳ ಸಂತೆಯಲ್ಲಿ ಮಾರಾಟವಾಗದಂತೆ ಸರಕಾರ ಪರಿಶೀಲನೆ ನಡೆಸುತ್ತಿರಬೇಕು ಎಂದು ಕೂಡ ಸಂಸದೀಯ ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News