ಕಾಂಗ್ರೆಸಿಗರು ಬಿಜೆಪಿ ಸೇರುವ ಅಗತ್ಯವೇ ಇಲ್ಲ....

Update: 2020-11-22 04:42 GMT

ಕಾಂಗ್ರೆಸ್ ಪಕ್ಷವನ್ನು ಸರ್ಜರಿಗೊಳಪಡಿಸಬೇಕು ಎಂದು ಹಿರಿಯ ನಾಯಕರು ಬೇಡಿಕೆ ಇಟ್ಟಂತೆಯೇ, ಸೋನಿಯಾಗಾಂಧಿಯವರು ಸಭೆಯೊಂದನ್ನು ಕರೆದರು. ನೋಡಿದರೆ ವೈದ್ಯಕೀಯ ಧಿರಿಸನ್ನು ಧರಿಸಿ ಅವರು ಆಗಮಿಸುತ್ತಿದ್ದರು. ಅವರ ಹಿಂದೆ ಕತ್ತರಿ, ಬ್ಲೇಡು ಇತ್ಯಾದಿಗಳ ಜೊತೆಗೆ ರಾಹುಲ್ ಗಾಂಧಿ ನಡೆದು ಬರುತ್ತಿದ್ದರು. ಕಾಂಗ್ರೆಸ್ ನಾಯಕರಂತೂ ಜೊಲ್ಲು ಸುರಿಸುತ್ತಾ ಕಾಯತೊಡಗಿದರು. ಕಾಂಗ್ರೆಸ್ ಎನ್ನುವ ಕೇಕನ್ನು ಕತ್ತರಿಸಿ ನಮಗೆಲ್ಲ ಹಂಚುತ್ತಾರೆ ಎಂದು ಒಳಗೊಳಗೆ ಖುಷಿ ಪಡತೊಡಗಿದರು.

ಮೇಡಂ ಬಂದವರೇ ಭಾಷಣಕ್ಕೆ ತೊಡಗಿದರು ‘‘ನಾವೀಗ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಆತ್ಮಾವಲೋಕನ ಮಾಡಬೇಕು. ಅದಕ್ಕಾಗಿ ಸರ್ಜರಿ ಮಾಡಬೇಕಾಗಿದೆ. ಯಾರ್ಯಾರ ಹೃದಯದೊಳಗೆ ಯಾರಿದ್ದಾರೆ ಎನ್ನುವುದನ್ನು ಸರ್ಜರಿಯ ಮೂಲಕ ಕಂಡು ಹಿಡಿದು, ಅಲ್ಲಿ ಕಾಂಗ್ರೆಸ್ ಇಲ್ಲದಿದ್ದರೆ ಮರುಸ್ಥಾಪಿಸುವುದಕ್ಕಾಗಿ ಇಂದು ನಾವಿಲ್ಲಿ ನೆರೆದಿದ್ದೇವೆ...’’

ಒಮ್ಮೆಲೆ ಸಭೆಯಲ್ಲಿ ಗುಜುಗುಜು ಆರಂಭವಾಯಿತು. ‘ಕಾಂಗ್ರೆಸ್‌ಗೆ ಸರ್ಜರಿ ಮಾಡುತ್ತಾರೆ ಎಂದರೆ ಈಯಮ್ಮ ನಮಗೇ ಸರ್ಜರಿ ಮಾಡಲು ಹೊರಟಿದ್ದಾರಲ್ಲ....’ ಕಾಂಗ್ರೆಸ್‌ನ ಹಿರಿಯರೆಲ್ಲ ಆತಂಕಗೊಂಡರು. ಈರಪ್ಪ ಮೊಇಲಿಯವರು ಎದ್ದು ನಿಂತು ‘‘ಮೇಡಂ....ನನ್ನ ಒಂದು ಮಹಾಕಾವ್ಯ ಅರ್ಧದಲ್ಲೇ ಉಳಿದು ಬಿಟ್ಟಿದೆ...ಅದನ್ನು ತಕ್ಷಣ ಮುಗಿಸಿ ವಾಪಸಾಗುತ್ತೇನೆ....’’ ಎಂದು ಹೊರಡಲು ನೋಡಿದರು.

‘‘ಯಾರೂ ಎದ್ದು ಹೋಗುವ ಹಾಗಿಲ್ಲ. ಹೊರಗೆ ಬಾಗಿಲಿಗೆ ಬೀಗ ಹಾಕಲಾಗಿದೆ. ಒಬ್ಬೊಬ್ಬರಾಗಿ ಸಾಲಾಗಿ ಆಪರೇಷನ್ ಥಿಯೇಟರ್‌ಗೆ ಬರಬೇಕು. ಎಲ್ಲರ ಹೃದಯಗಳನ್ನು ಬಿಡಿಸಿ ನಿಮ್ಮ ನಿಮ್ಮ ಆತ್ಮಗಳನ್ನ್ನು ಪರೀಕ್ಷೆ ಮಾಡಲಾಗುವುದು...’’ ಮೇಡಂ ಸ್ಪಷ್ಟವಾಗಿ ಹೇಳಿದರು. ರಾಹುಲ್ ಗಾಂಧಿಯವರು ಕಿಸಕ್ಕನೆ ನಕ್ಕರು. ಮೇಡಂ ಮಗನ ಕಡೆಗೆ ದುರುಗುಟ್ಟಿ ನೋಡಿದಾಕ್ಷಣ ಗಂಭೀರರಾದರು.

‘‘ಮೇಡಂ...ತಕ್ಷಣ ಟಾಯ್ಲೆಟಿಗೆ ಹೋಗಿ ಬರ್ಲಾ....’’ ಗುಲಾಮ್ ನಬಿ ಆಝಾದ್ ಎದ್ದು ಕೇಳಿದರು.
‘‘ಹೀಗೆ ಆದರೆ ಟಾಯ್ಲೆಟ್‌ನ್ನೇ ಕಾಂಗ್ರೆಸ್ ಆಫೀಸ್ ಮಾಡಬೇಕಾದೀತು....ಕುಳಿತು ಕೊಳ್ಳಿ...ಆಪರೇಷನ್ ಥಿಯೇಟರ್‌ನಲ್ಲೇ ಅದಕ್ಕೆಲ್ಲ ವ್ಯವಸ್ಥೆ ಇದೆ...’’

ಆಝಾದ್ ಮೆಲ್ಲಗೆ ‘ಮುಜೇ ಚಾಯಿಯೇ ಆಝಾದೀ...’ ಎಂದು ಗೊಣಗಿದರು. ಜೈ ರಾಮ್ ರಮೇಶ್ ಮೆಲ್ಲಗೆ ಎದ್ದು ನಿಂತರು ‘‘ಮೇಡಂ...ನೀವು ಮೊದಲೇ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ನಾನು ನನ್ನ ಹೃದಯವನ್ನು ಮತ್ತು ಆತ್ಮವನ್ನು ಮನೆಯಲ್ಲೇ ಬಿಟ್ಟು ಬಂದಿದ್ದೇನೆ...’’
‘‘ಕುಳಿತುಕೊಳ್ಳಿ.... ಇದೆಯೋ ಇಲ್ಲವೋ ಸರ್ಜರಿ ಮಾಡಿ ನೋಡಲೇ ಬೇಕು...’’ ಮೇಡಂ ಹೇಳಿದರು.
‘‘ಅದರ ಬದಲು ಕಾಂಗ್ರೆಸ್‌ಗೇ ಸರ್ಜರಿ ಮಾಡಿ ಬಿಡಿ ಮೇಡಂ....’’ ಸಿಬಲ್ ಸಲಹೆ ನೀಡಿದರು.

‘‘ಕಾಂಗ್ರೆಸ್‌ನ ಹಿರಿಯ ನಾಯಕರೊಳಗೇ ಕಾಂಗ್ರೆಸ್ ಇಲ್ಲದೇ ಇದ್ದ ಮೇಲೆ ಕಾಂಗ್ರೆಸ್‌ಗೆ ಸರ್ಜರಿ ಮಾಡಿ ಪ್ರಯೋಜನವೇನು?’’ ಎನ್ನುತ್ತಾ ಮೇಡಂ ಕತ್ತರಿ, ಚಾಕು ಹಿಡಿದುಕೊಂಡು ಆಪರೇಷನ್ ಥಿಯೇಟರ್ ಒಳಗೆ ಹೋದರು. ರಾಹುಲ್ ಒಬ್ಬೊಬ್ಬರನ್ನೇ ಹೆಸರು ಹಿಡಿದು ಕರೆದು ಒಳಗೆ ಕಳುಹಿಸ ತೊಡಗಿದರು.
ಈರಪ್ಪ ಮೊಇಲಿ ಅವರು ಒಳಗೆ ಹೋಗಿ ಐದು ನಿಮಿಷ ಆಗಿಲ್ಲ ‘‘ಏನ್ರೀ ಈರಪ್ಪ ಅವರೇ, ನನ್ನ ಫೋಟೊ ಬದಲಿಗೆ ಹೃದಯದಲ್ಲಿ ಅಂಬಾನಿ ಫೋಟೊ ಇಟ್ಟುಕೊಂಡು ಓಡಾಡ್ತಾ ಇದ್ದೀರಲ್ಲ....ಅದ್ಯಾರ್ರೀ...ಒಬ್ರು ಸ್ವಾಮೀಜಿಗಳು....’’ ಮೇಡಂ ಜೋರಾಗಿ ಪ್ರಶ್ನಿಸುವುದು ಕೇಳಿಸಿತು.

‘‘ಮೇಡಂ...ಅದು ಪೇಜಾವರ ಶ್ರೀಗಳು ಮೇಡಂ...’’ ಮೊಯ್ಲಿ ಉತ್ತರಿಸುತ್ತಿದ್ದರು. ‘‘ಹೃದಯದೊಳಗೆ ನಿಮ್ಮ ಆತ್ಮ ಎಲ್ಲಿ? ಕಾಣುತ್ತಿಲ್ಲ? ಅದೇನ್ರಿ ಮೂಲೆಯಲ್ಲಿ....’’ ಮೇಡಂ ಪ್ರಶ್ನೆ.
‘‘ಅದು...ಅದು....’’
‘‘ಓ ಮೈ ಗಾಡ್...ಮೂಲೆಯಲ್ಲಿ ನರೇಂದ್ರ ಮೋದಿಯ ಪೋಟೊ ಇಟ್ಟುಕೊಂಡಿದ್ದೀರಲ್ರೀ...’’ ಮೇಡಂ ಅಚ್ಚರಿಯಿಂದ ಪ್ರಶ್ನೆ ಕೇಳಿದರು.
‘‘ಕಾಂಗ್ರೆಸ್ ಸಂಪೂರ್ಣ ಮುಳುಗಿದಾಗ ಇರಲಿ ಎಂದು ಇಟ್ಟುಕೊಂಡಿರುವುದು ಮೇಡಂ....’’ ಈರಪ್ಪ ರು ತಡವರಿಸುತ್ತಾ ಹೇಳಿದರು.
ಈಗ ಆಝಾದ್ ಸರದಿ.

‘‘ಏನ್ರೀ ಆಝಾದ್...ಹೃದಯವೇ ಇಲ್ಲವಲ್ರೀ....ಅದು ಹೇಗೆ ಈವರೆಗೆ ಬದುಕಿದ್ದೀರಿ?’’ ಮೇಡಂ ಆತಂಕದಿಂದ ಕೇಳಿದರು.
‘‘ಕಾಂಗ್ರೆಸೇ ನನ್ನ ಹೃದಯ ಮೇಡಂ...’’ ಎಂದು ಆಝಾದ್ ಸ್ಪಷ್ಟೀಕರಣ ನೀಡಲು ತೊಡಗಿದರು. ‘‘ಹೃದಯ ಇದ್ದಿದ್ದರೆ ಅದು ಕಾಶ್ಮೀರಕ್ಕಾಗಿ ಮಿಡಿಯುತ್ತಿತ್ತು. ಮಿಡಿದರೆ ನಾನು ದೇಶದ್ರೋಹಿಯಾಗುತ್ತಿದ್ದೆ. ದೇಶದ್ರೋಹಿಯಾಗಿ ಬಿಟ್ಟರೆ ಕಾಂಗ್ರೆಸ್ ನನ್ನ ಕೈ ಬಿಡುತ್ತದೆ. ಅದಕ್ಕಾಗಿ ಹೃದಯವನ್ನು ಕಿತ್ತು ಬಿಸಾಕಿದೆ...’’

ಜೈರಾಮ್ ರಮೇಶ್‌ರ ಸರ್ಜರಿಯಾಗುತ್ತಿದ್ದಂತೆಯೇ ಅಚ್ಚರಿ ಕಾದಿತ್ತು. ಹೃದಯವಿರುವ ಜಾಗದಲ್ಲಿ ಕಿಡ್ನಿಯಿತ್ತು. ಕಿಡ್ನಿಯಿರುವ ಜಾಗದಲ್ಲಿ ಮೆದುಳಿತ್ತು. ಮೆದುಳು ಇರುವ ಜಾಗದಲ್ಲಿ ಸೆಗಣಿಯಿತ್ತು. ಶಶಿ ತರೂರ್ ಅವರ ಹೃದಯವನ್ನು ತೆರೆದು ನೋಡಿದರೆ ಮೂಲೆಯಲ್ಲಿ ಪುಷ್ಕರ್ ಸುನಂದ ಅವರು ಅಳುತ್ತಿದ್ದರು. ಇನ್ನೊಂದು ಮೂಲೆಯಲ್ಲಿ ವಿಶ್ವಸಂಸ್ಥೆಯ ಕುರ್ಚಿಯೊಂದು ಮುರಿದು ಬಿದ್ದಿತ್ತು. ಕಸಬರಿಕೆಯಿಂದ ಗುಡಿಸಿದರೂ ಕಾಂಗ್ರೆಸ್‌ನ ತುಣುಕೂ ಅಲ್ಲಿರಲಿಲ್ಲ. ಬಹುತೇಕ ನಾಯಕರಲ್ಲಿ ಮೋದಿಯ ಮುಖ ಪತ್ತೆಯಾಗಿದ್ದರೆ, ಹಲವರ ಎದೆಯೊಳಗೆ ಆರೆಸ್ಸೆಸ್ ಮುಖಂಡ ಭಾಗವತರ ಪತ್ತೆಯಾಯಿತು. ಕೆಲವರ ಎದೆಯೊಳಗೆ ಅಮಿತ್ ಶಾ ಕೂಡ ವೀರಾಜಮಾನರಾಗಿದ್ದರು. ಚಿದಂಬರಂ ಎದೆಯೊಳಗೆ ಅವರ ಮಗನೇ ವೀರಾಜಮಾನವಾಗಿದ್ದ. ‘‘ಯಾರಲ್ಲೂ ಆತ್ಮವೇ ಇಲ್ಲವೆಂದ ಮೇಲೆ ‘ಆತ್ಮಾವಲೋಕನ’ ಹೇಗೆ ಮಾಡುವುದು’’ ಮೇಡಂಗೆ ಅತಿದೊಡ್ಡ ಸಮಸ್ಯೆಯಾಯಿತು.

‘‘ನೋಡಿ...ಮೊದಲು ನಿಮ್ಮ ನಿಮ್ಮ ಎದೆಯಲ್ಲಿ ಕಾಂಗ್ರೆಸ್‌ನ ಪ್ರತಿಷ್ಠಾಪನೆಯಾಗದೆ ಕಾಂಗ್ರೆಸ್‌ನ್ನು ಉಳಿಸಲು ಸಾಧ್ಯವಿಲ್ಲ. ಸುಮ್ಮನೆ ನಾನು ಮತ್ತು ನನ್ನ ಮಗ ಹೊರಗೆ ದುಡಿದು ತಂದುದನ್ನು ತಿಂದು ಬದುಕಿ ವಿವಿಧ ಹೃದಯ ರೋಗಗಳಿಗೆ ಈಡಾಗಿದ್ದೀರಾ. ಸದ್ಯಕ್ಕೆ ಕಾಂಗ್ರೆಸ್‌ನಲ್ಲೇ ನಾವೊಂದು ವೃದ್ಧಾಶ್ರಮ ವಿಂಗ್ ಮಾಡಲಿದ್ದೇವೆ. ನಿಮ್ಮನ್ನೆಲ್ಲ ಅಲ್ಲಿಗೆ ಸ್ಥಳಾಂತರಿಸಲಿದ್ದೇವೆ....’’

ಎಂದದ್ದೇ ತಡ ‘‘ಕಾಂಗ್ರೆಸ್ ನಮ್ಮನ್ನು ನಿರ್ಲಕ್ಷಿಸಿದೆ...’’
‘‘ಮೋದಿಯವರಿಂದ ಮಾತ್ರ ದೇಶದ ಏಳಿಗೆ ಸಾಧ್ಯ’’

‘‘ನಮಗೆ ಕಾಂಗ್ರೆಸ್ ಸೂಕ್ತ ಸ್ಥಾನಮಾನ ನೀಡಲಿಲ್ಲ...’’ ಎಂದು ಎಲ್ಲರೂ ಗೊಣಗ ತೊಡಗಿದರು. ‘‘ನಾವೆಲ್ಲ ಬಿಜೆಪಿ ಸೇರುತ್ತೇವೆ....’’ ಯಾರೋ ಒಬ್ಬರು ಎಚ್ಚರಿಕೆ ನೀಡಿದರು.

ಅಷ್ಟರಲ್ಲಿ ಯಾರೋ ಜೋರಾಗಿ ಹೇಳಿದರು ‘‘ನೀವು ಬಿಜೆಪಿ ಸೇರುವ ಅಗತ್ಯವೇ ಇಲ್ಲ. ಮೇಡಂ ಮತ್ತು ಅವರ ಮಗ ಕೋಣೆಯಿಂದ ಹೊರ ನಡೆದರೆ ಸಾಕು, ಕಾಂಗ್ರೆಸ್ ಪಕ್ಷವೇ ಬಿಜೆಪಿಯಾಗಿ ಬದಲಾಗುತ್ತದೆ’’

ಎಲ್ಲರೂ ‘‘ಯಾರದು?’’ ಎಂದು ನೋಡಿದರೆ ಪತ್ರಕರ್ತ ಎಂಜಲು ಕಾಸಿ. ರಹಸ್ಯ ಸಭೆಗೆ ಇವನು ಹೇಗೆ ಬಂದ? ‘‘ಹಿಡಿಯಿರಿ ಅವನನ್ನು’’ ಒಕ್ಕೊರಲಲ್ಲಿ ಅಬ್ಬರಿಸಿದ್ದೇ ತಡ ಕಾಸಿ ಅಲ್ಲಿಂದ ಓಡ ತೊಡಗಿದ.

chelayya@gmail.com

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News