ಅಕ್ಷಯ್ ಕುಮಾರ್ ಗೆ 500 ಕೋ. ರೂ. ಪರಿಹಾರ ನೀಡಲು ನಿರಾಕರಿಸಿದ ಯುಟ್ಯೂಬರ್ ರಶೀದ್

Update: 2020-11-21 17:40 GMT

ಮುಂಬೈ, ನ. 21: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ನಟ ಅಕ್ಷಯ್ ಕುಮಾರ್ ತನ್ನ ವಿರುದ್ಧ ಜಾರಿಗೊಳಿಸಿದ್ದ ಮಾನನಷ್ಟ ನೋಟಿಸ್ ಬಗ್ಗೆ ಯುಟ್ಯೂಬರ್ ರಶೀದ್ ಸಿದ್ದೀಖಿ ವಿರೋಧ ವ್ಯಕ್ತಪಡಿಸಿದ್ದಾರೆ.

 ತನ್ನ ವೀಡಿಯೊಗಳಲ್ಲಿ ಯಾವುದೇ ಮಾನಹಾನಿಕರ ಅಂಶಗಳಿಲ್ಲ ಎಂದು ಹೇಳಿರುವ ರಶೀದ್ ಸಿದ್ದೀಖಿ, ಅಕ್ಷಯ್ ಕುಮಾರ್ ಕೋರಿದ 500 ಕೋಟಿ ರೂಪಾಯಿ ಪರಿಹಾರ ನೀಡಲು ನಿರಾಕರಿಸಿದ್ದಾರೆ.

ತನ್ನ ವಿರುದ್ಧ ಜಾರಿಗೊಳಿಸಲಾದ ನೋಟಿಸನ್ನು ಹಿಂಪಡೆಯುವಂತೆ ಅಕ್ಷಯ್ ಕುಮಾರ್ ಅವರನ್ನು ಆಗ್ರಹಿಸಿರುವ ಸಿದ್ದೀಖಿ, ವಿಫಲರಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ಮಾಡಲಾದ ತಪ್ಪು ಹಾಗೂ ಆಧಾರ ರಹಿತ ಆರೋಪಗಳಿಂದ ತನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ಆದುದರಿಂದ 500 ಕೋಟಿ ರೂಪಾಯಿ ಪರಿಹಾರ ನೀಡುವಂತೆ ನಟ ಅಕ್ಷಯ್ ಕುಮಾರ್ ನವೆಂಬರ್ 17ರಂದು ಸಿದ್ದೀಖಿ ಅವರ ವಿರುದ್ಧ ನೋಟಿಸು ಜಾರಿಗೊಳಿಸಿದ್ದರು. ಐ ಸಿ ಲೀಗಲ್ ಕಾನೂನು ಸಂಸ್ಥೆ ಮೂಲಕ ನೋಟಿಸು ಜಾರಿಗೊಳಿಸಿರುವ ಅಕ್ಷಯ್ ಕುಮಾರ್, ಸಿದ್ದೀಖಿ ತನ್ನ ಯೂ ಟ್ಯೂಬ್ ಚಾನೆಲ್ ಎಫ್ಎಫ್ ನ್ಯೂಸ್ ಮೂಲಕ ಹಲವು ಮಾನ ಹಾನಿಕರ ಹಾಗೂ ಅವಹೇಳನಕಾರಿ ವೀಡಿಯೊಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು.

 ಇದಕ್ಕೆ ತನ್ನ ಪರ ನ್ಯಾಯವಾದಿ ಜೆ.ಪಿ. ಜೈಸ್ವಾಲ್ ಅವರ ಮೂಲಕ ಪ್ರತಿಕ್ರಿಯೆ ಕಳುಹಿಸಿರುವ ಸಿದ್ದೀಖಿ, ಅಕ್ಷಯ್ ಕುಮಾರ್ ಅವರ ಆರೋಪ ತಪ್ಪು, ದುಃಖಕರ ಹಾಗೂ ದಬ್ಬಾಳಿಕೆ ರೀತಿಯದ್ದು. ತನಗೆ ಕಿರುಕುಳ ನೀಡುವ ಉದ್ದೇಶದಿಂದ ಅವರು ಈ ಆರೋಪ ಮಾಡಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News