ಕೋವಿಡ್, ಮಲೇರಿಯಾ ಬಳಿಕ ವಿಷಕಾರಿ ಹಾವು ಕಡಿತದಿಂದಲೂ ಬಚಾವಾದ!

Update: 2020-11-22 06:43 GMT

ಹೊಸದಿಲ್ಲಿ: ಕೊರೋನ ವೈರಸ್, ಡೆಂಗಿ ಹಾಗೂ ಮಲೇರಿಯಾದಿಂದ ಬದುಕುಳಿದಿರುವ ಬ್ರಿಟನ್ ಪ್ರಜೆಯೊಬ್ಬರು ರಾಜಸ್ಥಾನದಲ್ಲಿ ವಿಷಕಾರಿ ಹಾವು ಕಡಿತಕ್ಕೆ ಒಳಗಾದ ನಂತರ ಚೇತರಿಸಿಕೊಳ್ಳುತ್ತಿದ್ದಾರೆ.

ರಾಜಸ್ಥಾನದ ಜೋದ್ಪುರ ಜಿಲ್ಲೆಯಲ್ಲಿ ಹಾವು ಕಡಿತಕ್ಕೆ ಒಳಗಾಗಿದ್ದ ಇಯಾನ್ ಜೋನ್ಸ್ ಅವರನ್ನು ಜೋದ್ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

"ಜೋದ್ಪುರದ ಹಳ್ಳಿಯೊಂದರಲ್ಲಿ ಹಾವು ಕಚ್ಚಿದ ನಂತರ ಕಳೆದ ವಾರ ಜೋನ್ಸ್ ಅವರು ನಮ್ಮ ಬಳಿಗೆ ಬಂದರು. ಆರಂಭದಲ್ಲಿ ಅವರಿಗೆ ಕೋವಿಡ್-19 ಪಾಸಿಟಿವ್(2ನೇ ಬಾರಿ)ಇದೆ ಎಂದು ಶಂಕಿಸಲಾಗಿತ್ತು. ಆದರೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಆಸ್ಪತ್ರೆಗೆ ದಾಖಲಾದಾಗ ಅವರಿಗೆ ದೃಷ್ಟಿ ಮಸುಕಾಗುವುದು ಹಾಗೂ ನಡೆಯಲು ಕಷ್ಟವಾಗುವುದು ಸೇರಿದಂತೆ ಹಾವು ಕಚ್ಚಿದಾಗ ಇರುವ ಲಕ್ಷಣಗಳು ಕಾಣಿಸಿಕೊಂಡಿತ್ತು'' ಎಂದು ಜೋನ್ಸ್‌ಗೆ ಚಿಕಿತ್ಸೆ ನೀಡುತ್ತಿರುವ ಸ್ಥಳೀಯ ಮೆಡಿಪ್ಲಸ್ ಆಸ್ಪತ್ರೆಯ ವೈದ್ಯ ಅಭಿಷೇಕ್ ಹೇಳಿದ್ದಾರೆ.

ಜೋನ್ಸ್ ಅವರನ್ನು ಕಳೆದ ವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

 "ನನ್ನ ತಂದೆ ಓರ್ವ ಹೋರಾಟಗಾರ, ಭಾರತದಲ್ಲಿ ಅವರು ಈಗಾಗಲೇ ಕೋವಿಡ್-19 ಸೋಂಕಿಗೆ ಒಳಗಾಗುವ ಮೊದಲು ಮಲೇರಿಯಾ ಹಾಗೂ ಡೆಂಗಿ ಜ್ವರದಿಂದ ಬಳಲಿದ್ದರು'' ಎಂದು ಜೋನ್ಸ್ ಅವರ ಪುತ್ರ ಸೆಬ್ ಜೋನ್ಸ್ ಹೇಳಿದ್ದಾರೆ.

ಕೊರೋನದಿಂದಾಗಿ ತನ್ನ ದೇಶಕ್ಕೆ ವಾಪಸಾಗದೆ ಭಾರತದಲ್ಲಿ ಉಳಿದುಕೊಂಡಿರುವ ಜೋನ್ಸ್ ರಾಜಸ್ಥಾನದ ಸಾಂಪ್ರದಾಯಿಕ ಕುಶಲಕರ್ಮಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಸಮಾಜಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News