ನೀತಿ ಆಯೋಗದ ಉಪ ಕಾರ್ಯದರ್ಶಿಯಾಗಿ ಕರ್ನಾಟಕದ ಶುಐಬ್ ಅಹ್ಮದ್ ಕಲಾಲ್ ನೇಮಕ

Update: 2020-11-22 16:56 GMT

ಹೊಸದಿಲ್ಲಿ, ನ. 22: ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಕೇಂದ್ರದ ಸೇವೆಯ ನಿಯೋಜನೆಗೆ ಶಿಫಾರಸು ಮಾಡಲಾದ ಶುಐಬ್ ಅಹ್ಮದ್ ಕಲಾಲ್ (ಐಇಎಸ್) ಅವರನ್ನು ನೀತಿ ಆಯೋಗದ ಉಪ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸಿಬ್ಬಂದಿ ಯೋಜನೆ (ಸಿಎಸ್‌ಎಸ್) ಅಡಿಯಲ್ಲಿ ಹುದ್ದೆಯ ಅಧಿಕಾರ ಸ್ವೀಕರಿಸುವ ದಿನಾಂಕದಿಂದ ಅಥವಾ ಮುಂದಿನ ಆದೇಶದ ವರೆಗೆ ಯಾವುದು ಮೊದಲಿನದ್ದೊ ಅಲ್ಲಿಂದ 5 ವರ್ಷಗಳ ಅವಧಿಗೆ ಅವರನ್ನು ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ತರಬೇತಿ ಇಲಾಖೆ (ಡಿಒಪಿಟಿ)ಯ ಆದೇಶ ತಿಳಿಸಿದೆ. 

ನೀತಿ ಆಯೋಗದ ನೂತನ ಹುದ್ದೆಯ ಅಧಿಕಾರ ಸ್ವೀಕರಿಸುವ ಬಗ್ಗೆ ಸೂಚನೆ ನೀಡಿ ಅವರು ಕೂಡಲೇ ತನ್ನ ಕರ್ತವ್ಯದಿಂದ ಬಿಡುಗಡೆಯಾಗಬಹುದು ಎಂದು ಆದೇಶ ಹೇಳಿದೆ. ಕಲಾಲ್ ಅವರು 2011ನೇ ಬ್ಯಾಚ್‌ನ ಭಾರತೀಯ ಆರ್ಥಿಕ ಸೇವೆ (ಐಇಎಸ್)ಯ ಅಧಿಕಾರಿ. ಅವರು ಪ್ರಸ್ತುತ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಕಲಾ ಪದವಿ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಈ ಹಿಂದೆ ಅವರು ಹಣಕಾಸು ಸಚಿವಾಲಯ, ಪರಿಸರ ಹಾಗೂ ಅರಣ್ಯ ಸಚಿವಾಲಯದ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ದಿನ ನೀಡಿದ ಇನ್ನೊಂದು ಆದೇಶದಲ್ಲಿ ರಾಹುಲ್ (ಐಆರ್‌ಟಿಎಸ್) ಅವರನ್ನು ನೀತಿ ಆಯೋಗದ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಲು ಆಯ್ಕೆ ಮಾಡಲಾಗಿದೆ. ಅವರನ್ನು ರೈಲ್ವೆ ಸಚಿವಾಲಯ ಕೇಂದ್ರ ಸೇವೆಗೆ ನಿಯೋಜಿಸಲು ಶಿಫಾರಸು ಮಾಡಿತ್ತು. ಕೇಂದ್ರ ಸಿಬ್ಬಂದಿ ಯೋಜನೆ (ಸಿಎಸ್‌ಎಸ್) ಅಡಿಯಲ್ಲಿ ಹುದ್ದೆಯ ಅಧಿಕಾರ ಸ್ವೀಕರಿಸುವ ದಿನಾಂಕದಿಂದ ಅಥವಾ ಮುಂದಿನ ಆದೇಶದ ವರೆಗೆ ಯಾವುದು ಮೊದಲೋ ಅಲ್ಲಿಂದ 4 ವರ್ಷಗಳ ಅವಧಿಗೆ ಅವರನ್ನು ನೇಮಕ ಮಾಡಲು ಆಯ್ಕೆ ಮಾಡಲಾಗಿದೆ. ನೀತಿ ಆಯೋಗದ ನೂತನ ಹುದ್ದೆಯ ಅಧಿಕಾರ ಸ್ವೀಕರಿಸುವ ಬಗ್ಗೆ ಸೂಚನೆ ನೀಡಿ ಅವರು ಕೂಡಲೇ ತನ್ನ ಕರ್ತವ್ಯದಿಂದ ಬಿಡುಗಡೆಯಾಗಬಹುದು ಎಂದು ಸಿಬ್ಬಂದಿ ತರಬೇತಿ ಇಲಾಖೆ (ಡಿಒಪಿಟಿ) ಆದೇಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News