ಜನವರಿ ಕೊನೆಗೆ ಸಂಸತ್ ಅಧಿವೇಶನ?

Update: 2020-11-23 03:43 GMT

ಹೊಸದಿಲ್ಲಿ, ನ.23: ರಾಷ್ಟ್ರ ರಾಜಧಾನಿಯಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ರದ್ದಾಗುವ ಸಾಧ್ಯತೆ ನಿಚ್ಚಳವಾಗಿದ್ದು, ಚಳಿಗಾಲ ಹಾಗೂ ಬಜೆಟ್ ಅಧೀವೇಶನಗಳನ್ನು ಒಟ್ಟಾಗಿ ಜನವರಿ ಕೊನೆಗೆ ನಡೆಸುವ ನಿರೀಕ್ಷೆ ಇದೆ.

ಫೆಬ್ರವರಿ 1ಕ್ಕೆ ಬಜೆಟ್ ಮಂಡನೆಯಾಗಲಿದ್ದು, ಇದಕ್ಕೆ ಮುನ್ನ ಚಳಿಗಾಲದ ಹಾಗೂ ಬಜೆಟ್ ಅಧಿವೇಶನವನ್ನು ಒಟ್ಟಾಗಿ ಕರೆಯಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ಹಲವು ಸಂಸದರು ಮತ್ತು ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೆಪ್ಟಂಬರ್‌ನಲ್ಲಿ ಮಳೆಗಾಲದ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು.

ಚಳಿಗಾಲದ ಅಧಿವೇಶನ ವಿಳಂಬವಾಗುತ್ತಿರುವುದು ಇದೇ ಮೊದಲಲ್ಲ. 1952ರಿಂದ 2019ರವರೆಗೆ ನಡೆದ 65 ಚಳಿಗಾಲದ ಅಧಿವೇಶನಗಳ ಪೈಕಿ ಎಂಟು ಬಾರಿ ಡಿಸೆಂಬರ್‌ನಲ್ಲಿ ನಡೆದಿದ್ದು, 1962 ಹಾಗೂ 63ರಲ್ಲಿ ಕ್ರಮವಾಗಿ ಜನವರಿ 21 ಹಾಗೂ 25ರಂದು ಆರಂಭವಾಗಿತ್ತು. 62-63ರಲ್ಲಿ ಚಳಿಗಾಲದ ಅಧಿವೇಶನದ ಮೊದಲಾರ್ಧ ನವೆಂಬರ್ 18ರಿಂದ ಡಿಸೆಂಬರ್ 12ರವರೆಗೆ ನಡೆದರೆ, ಉತ್ತರಾರ್ಧ 1963ರ ಜನವರಿ 21ರಿಂದ 25ರವರೆಗೆ ನಡೆದಿತ್ತು.

2003ರಲ್ಲೂ ಮೊದಲಾರ್ಧ ಡಿಸೆಂಬರ್ 2ರಂದು ಆರಂಭವಾದರೆ ಉತ್ತರಾರ್ಧ 2004ರ ಜನವರಿ 30ರಿಂದ ಫೆಬ್ರವರಿ 5ರವರೆಗೆ ನಡೆದಿತ್ತು. 1993, 2003, 2004 ಮತ್ತು 2013ರಲ್ಲಿ ಹೀಗೆ ನಾಲ್ಕು ಬಾರಿ ಚಳಿಗಾಲದ ಅಧಿವೇಶನ ಡಿಸೆಂಬರ್ ಮೊದಲ ವಾರ ಆರಂಭವಾಗಿದ್ದು, 2016ರಲ್ಲಿ ಡಿಸೆಂಬರ್ ಮೂರನೇ ವಾರ ಹಾಗೂ 1990ರಲ್ಲಿ ಡಿಸೆಂಬರ್ 4ನೇ ವಾರ ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News