ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿ: ಎಡಿಟರ್ಸ್ ಗಿಲ್ಡ್

Update: 2020-11-23 04:30 GMT

ಹೊಸದಿಲ್ಲಿ, ನ.23: ಪದ್ಮಶ್ರೀ ಪುರಸ್ಕೃತರು ಮತ್ತು ಶಿಲ್ಲಾಂಗ್ ಟೈಮ್ಸ್ ಸಂಪಾದಕರಾದ ಪ್ಯಾಟ್ರಿಕಾ ಮುಕ್ಹಿಮ್ ವಿರುದ್ಧದ ಅಪರಾಧ ಪ್ರಕರಣವನ್ನು ರದ್ದುಪಡಿಸಲು ಮೇಘಾಲಯ ಹೈಕೋರ್ಟ್ ನಿರಾಕರಿಸಿರುವ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ.

ಕೇವಲ ಸೆಲೆಬ್ರಿಟಿ ಪತ್ರಕರ್ತರ ಪರವಾಗಿ ಮಾತ್ರ ಗಿಲ್ಡ್ ಹೇಳಿಕೆ ನೀಡುತ್ತದೆ ಎಂದು ಆಪಾದಿಸಿ ಮುಕ್ಹಿಮ್ ಗಿಲ್ಡ್‌ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಕರಣವಲ್ಲದಿದ್ದರೂ ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿದ ತಕ್ಷಣ ಹೇಳಿಕೆ ನೀಡಿದ ಗಿಲ್ಡ್ ತಮ್ಮ ವಿಚಾರದಲ್ಲಿ ಮೌನ ವಹಿಸಿದೆ ಎಂದು ಅವರು ಟೀಕಿಸಿದ್ದರು. ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ವಿಚಾರವನ್ನು ಉನ್ನತ ನ್ಯಾಯಾಂಗ ಗಂಭೀರವಾಗಿ ಪರಿಗಣಿಸಬೇಕು ಎಂದು ಗಿಲ್ಡ್ ಆಗ್ರಹಿಸಿದೆ. ಪತ್ರಿಕಾ ವಲಯ ಸುಲಲಿತವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಬೇಕು ಎಂದೂ ಒತ್ತಾಯಿಸಿದೆ.

"ಮುಕ್ತ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸಲು ವಿವಿಧ ಕಾನೂನು ಅವಕಾಶಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದಕ್ಕೆ ಮುಕ್ಹಿಮ್ ಪ್ರಕರಣ ನಿದರ್ಶನ. ಸರಕಾರ ಹಾಗೂ ಕಾನೂನು ಜಾರಿ ಸಂಸ್ಥೆಗಳು ಪತ್ರಕರ್ತರೊಬ್ಬರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ವಿವಿಧ ಕಾನೂನು ಅವಕಾಶಗಳನ್ನು ಬಳಸಿಕೊಳ್ಳುತ್ತಿವೆ. ಅಪರಾಧ ದೂರು ಪ್ರಕ್ರಿಯೆಯೇ ಪತ್ರಕರ್ತರ ಪಾಲಿಗೆ ಶಿಕ್ಷೆಯಾಗುತ್ತಿದೆ ಹಾಗೂ ಮುಕ್ತ ಅಭಿವ್ಯಕ್ತಿಯನ್ನು ಚಲಾಯಿಸಲು ತಡೆಯಾಗಿ ಪರಿಣಮಿಸಿದೆ" ಎಂದು ಗಿಲ್ಡ್ ಪ್ರಕಟನೆ ಹೇಳಿದೆ.

ಸರಕಾರದ ವ್ಯವಹಾರಗಳನ್ನು ಪ್ರಶ್ನಿಸುವುದು ಮಾಧ್ಯಮದ ಜವಾಬ್ದಾರಿ. ಸಮಾಜದ ದೋಷಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಅವರನ್ನು ಹೊಣೆಗಾರರಾಗಿಸುವುದು ಸಲ್ಲದು ಎಂದು ಹೇಳಿಕೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News