ಕಾರ್ಪೊರೇಟ್‍ಗಳಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶ ನೀಡುವ ಆರ್‌ಬಿಐ ಕ್ರಮ ವಿನಾಶಕಾರಿ: ರಾಜನ್, ವಿರಲ್ ಆಚಾರ್ಯ

Update: 2020-11-23 11:40 GMT
ರಘುರಾಮ್ ರಾಜನ್, ವಿರಲ್ ಆಚಾರ್ಯ

ಹೊಸದಿಲ್ಲಿ: ದೇಶದ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್‍ಗಳನ್ನು ಆರಂಭಿಸಲು ಅನುವಾಗಲು ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆಗೆ ಸೂಕ್ತ ತಿದ್ದುಪಡಿ ತರಲು ಹಾಗೂ ಖಾಸಗಿ ಬ್ಯಾಂಕ್‍ಗಳ ಲೈಸನ್ಸಿಂಗ್ ನೀತಿಯ ಸಮಗ್ರ ಪುನರ್ ಪರಿಶೀಲನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆಂತರಿಕ ಸಮಿತಿ ಮಾಡಿರುವ ಶಿಫಾರಸನ್ನು ಮಾಜಿ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ ಹಾಗೂ ಆರ್ ಬಿ ಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಖಂಡಿಸಿದ್ದಾರೆ. ಇಂತಹ ಒಂದು ಕ್ರಮವನ್ನು ಕೈಗೊಂಡಿದ್ದೇ ಆದಲ್ಲಿ ಅದು ದೇಶದ ದೊಡ್ಡ ಸಂಸ್ಥೆಗಳ ಕೈಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಅಧಿಕಾರ ಕೇಂದ್ರೀಕರಿಸುವಂತಾಗುವುದಲ್ಲದೆ ಒಂದು ವೇಳೆ ಇಂತಹ  ಬ್ಯಾಂಕ್‍ಗಳು ವಿಫಲವಾದಲ್ಲಿ ಅದು ಮತ್ತೆ ಬೊಕ್ಕಸದ ಮೇಲೆ ದೊಡ್ಡ ಹೊರೆಯನ್ನೇ ಸೃಷ್ಟಿಸಲಿದೆ ಎಂದಿದ್ದಾರೆ ಎಂದು theprint.in ವರದಿ ಮಾಡಿದೆ.

ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾರ್ಪೊರೇಟ್‍ಗಳಿಗೆ ಅನುಮತಿ ನೀಡುವ ಕುರಿತು ಆರ್ ಬಿ ಐ ಆಂತರಿಕ ಸಮಿತಿ ಮಾಡಿರುವ ಶಿಫಾರಸು ಒಂದು 'ಬಾಂಬ್ ಶೆಲ್' ಎಂದು ರಘುರಾಮ್ ರಾಜನ್ ಇಂದು ತಮ್ಮ 'ಲಿಂಕ್ಡ್ ಇನ್' ಪುಟದಲ್ಲಿ ಬರೆದಿದ್ದಾರೆ ಹಾಗೂ ಈ ಪ್ರಸ್ತಾವನೆಯನ್ನು 'ಶೆಲ್ಫ್ ನಲ್ಲಿಯೇ ಬಾಕಿಯಿಡುವುದು ಒಳ್ಳೆಯದು,' ಎಂದಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಪೊರೇಟ್‍ಗಳ ಶಾಮೀಲಾತಿಯ ಈಗಿನ ಮಿತಿಗಳಿಗೇ ಅಂಟಿಕೊಳ್ಳುವುದು ಉತ್ತಮ ಎಂದು ರಘುರಾಮ್ ರಾಜನ್ ಹಾಗೂ ವಿರಲ್ ಆಚಾರ್ಯ ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.

"ದೊಡ್ಡ ಉದ್ದಿಮೆಗಳಿಗೆ ಹಣಕಾಸು ಸಹಾಯ ಬೇಕಿದ್ದರೆ ಅದು ಅವರಿಗೆ ಸುಲಭವಾಗಿ ದೊರೆಯುತ್ತದೆ, ಅವರದ್ದೇ ಬ್ಯಾಂಕ್ ಇದ್ದರೆ ಅಲ್ಲಿ ಪ್ರಶ್ನೆಗಳನ್ನು ಕೇಳಬೇಕಾದ ಅಗತ್ಯವೇ ಇರುವುದಿಲ್ಲ,'' ಎಂದು ಅವರು ಹೇಳಿದ್ದಾರೆ.

"ಇಂತಹ ಒಂದು ಕ್ರಮ ವಿನಾಶಕಾರಿಯಾಗಬಹುದು. ಸಾಲಗಾರನೇ ಮಾಲಿಕನಾಗಿದ್ದರೆ ಏನಾಗಬಹುದು?,'' ಎಂದು ಅವರು ಪ್ರಶ್ನಿಸಿದ್ದಾರೆ. ಕಾರ್ಪೊರೇಟ್‍ಗಳನ್ನು ಬ್ಯಾಂಕಿಂಗ್ ಕ್ಷೇತ್ರಗಳಿಗೆ ಅನುಮತಿಸಿದಲ್ಲಿ ಸಾಕಷ್ಟು ಸಾಲದಲ್ಲಿರುವ ಹಾಗೂ ರಾಜಕೀಯವಾಗಿ ಪ್ರಭಾವಿಯಾಗಿರುವ ಉದ್ಯಮ ಸಂಸ್ಥೆಗಳು ಬ್ಯಾಂಕ್ ಆರಂಭಿಸಲು ಪರವಾನಗಿಗಾಗಿ ಹೆಚ್ಚು ಒತ್ತಡ ಹೇರುವ ಸಾಧ್ಯತೆಯಿದೆ, ಇಂತಹ ಕ್ರಮ ರಾಜಕಾರಣದಲ್ಲಿ ಹಣ ಬಲವನ್ನು ಇನ್ನೂ ಅಧಿಕಗೊಳಿಸುತ್ತದೆ,'' ಎಂದೂ ಅವರು ಹೇಳಿದ್ದಾರೆ.

"ಆರ್ ಬಿ ಐ ಆಂತರಿಕ ಸಮಿತಿಗೆ ಇಂತಹ ಶಿಫಾರಸು ಈಗ ಮಾಡುವ ತುರ್ತು ಏನಿದೆ?,'' ಎಂದೂ ರಾಜನ್ ಮತ್ತು ಆಚಾರ್ಯ ಪ್ರಶ್ನಿಸಿದ್ದಾರೆ.

"ಈಗಿನ ಸಾರ್ವಜನಿಕ ರಂಗದ ಬ್ಯಾಂಕುಗಳ ಆಡಳಿತಗಳನ್ನು ಇನ್ನಷ್ಟು ವೃತ್ತಿಪರವಾಗಿಸಿ ಹಾಗೂ ಅವುಗಳಲ್ಲಿ ಸಾರ್ವಜನಿಕರ ಪಾಲುದಾರಿಕೆಯನ್ನು ಹೆಚ್ಚಿಸಬೇಕು. ಅದರ ಬದಲು ದೊಡ್ಡ ಸಂಸ್ಥೆಗಳ ಒಡೆತನದಲ್ಲಿ ಬ್ಯಾಂಕ್‍ಗಳನ್ನು ಆರಂಭಿಸುವುದು ಮೂರ್ಖತನವಾಗಿದೆ,'' ಎಂದೂ ಅವರಿಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News