"ಮೊದಲು ಪಿಒಕೆ ವಾಪಸ್ ತನ್ನಿ": ದೇವೇಂದ್ರ ಫಡ್ನವೀಸ್ ಕರಾಚಿ ಹೇಳಿಕೆಗೆ ರಾವತ್ ತಿರುಗೇಟು

Update: 2020-11-23 12:18 GMT

ಮುಂಬೈ: "ಪಾಕಿಸ್ತಾನದ ಕರಾಚಿ ಒಂದು ದಿನ ಭಾರತದ ಭಾಗವಾಗುವುದು'' ಹಾಗೂ ತಮ್ಮ ಪಕ್ಷ ಅಖಂಡ ಭಾರತ ಪರಿಕಲ್ಪನೆಯನ್ನು ಬೆಂಬಲಿಸುವುದು ಎಂದು ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಗೆ ಶಿವಸೇನೆ ನಾಯಕ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ.

"ಮೊದಲು ಪಾಕಿಸ್ತಾನವು ಆಕ್ರಮಿಸಿರುವ ಕಾಶ್ಮೀರವನ್ನು (ಹಿಂದೆ) ತನ್ನಿ, ಕರಾಚಿಗೆ ನಂತರ ಹೋಗಬಹುದು,'' ಎಂದು ರಾವತ್ ಹೇಳಿದ್ದಾರೆ.

ಮುಂಬೈಯಲ್ಲಿರುವ 'ಕರಾಚಿ ಸ್ವೀಟ್ಸ್' ಮಾಲಕನಿಗೆ ಆತನ ಅಂಗಡಿಯ ಹೆಸರು ಬದಲಾಯಿಸಿ ಏನಾದರೂ ಮರಾಠಿ ಹೆಸರು ಇಡುವಂತೆ ಶಿವಸೇನೆ ನಾಯಕ ನಿತಿನ್ ನಂದಗಾಂವ್ಕರ್ ಇತ್ತೀಚೆಗೆ ಹೇಳಿದ್ದರು. "ನಿಮ್ಮ ಪೂರ್ವಜರು ಪಾಕಿಸ್ತಾನದವರು. ನೀವು ಆ ದೇಶದಿಂದ ವಿಭಜನೆಯ ಸಂದರ್ಭ ಇಲ್ಲಿಗೆ ಬಂದಿದ್ದೀರಿ. ನಿಮಗೆ ಸ್ವಾಗತವಿದೆ ಆದರೆ ಕರಾಚಿ ಹೆಸರು ನನಗಿಷ್ಟವಿಲ್ಲ. ಪಾಕಿಸ್ತಾನದ ಆ ನಗರ ಉಗ್ರರ ತಾಣವಾಗಿದೆ,'' ಎಂದೂ ನಿತಿನ್ ಹೇಳಿದ್ದರಲ್ಲದೆ 15 ದಿನಗಳ ನಂತರ ಆ ಮಳಿಗೆಗೆ ಭೇಟಿ ನೀಡಿ ಹೆಸರು ಬದಲಾಯಿಸುವ ಔಪಚಾರಿಕತೆಗಳಲ್ಲಿ ಸಹಾಯ ಮಾಡುವುದಾಗಿ ತಿಳಿಸಿದ್ದರು.

ಈ ಘಟನೆಯ ನಂತರ ಅಂಗಡಿ ಮಾಲಕ ತನ್ನ ನಾಮಫಲಕವನ್ನು ದಿನಪತ್ರಿಕೆಯಿಂದ  ಮುಚ್ಚಿ ತನಗೆ ಯಾವುದೇ ಸಮಸ್ಯೆ ಬೇಡ ಎಂದಿದ್ದರು. ಈ ಘಟನಾವಳಿಯ ನಂತರ ಫಡ್ನವೀಸ್ ಅವರ ಹೇಳಿಕೆ ಬಂದಿತ್ತು.

ಆದರೆ ತಮ್ಮ ಪಕ್ಷದ ನಾಯಕನ ಕರಾಚಿ ಸ್ವೀಟ್ಸ್ ಕುರಿತ ಹೇಳಿಕೆಯಿಂದ ಶಿವಸೇನೆ ದೂರ ಸರಿದು ನಿಂತಿತ್ತು. "ಕರಾಚಿ ಬೇಕರಿ ಮತ್ತು ಕರಾಚಿ ಸ್ವೀಟ್ಸ್ ಮುಂಬೈಯಲ್ಲಿ ಕಳೆದ 60 ವರ್ಷಗಳಿಂದ ಇದೆ. ಅವರಿಗೆ ಪಾಕಿಸ್ತಾನದ ಜತೆ ಯಾವುದೇ ಸಂಬಂಧವಿಲ್ಲ. ಅವರ ಹೆಸರುಗಳನ್ನು ಬದಲಾಯಿಸಲು ಈಗ ಹೇಳುವುದು ಸರಿಯಲ್ಲ. ಹೆಸರು ಬದಲಾಯಿಸಬೇಕೆಂಬುದು ಶಿವಸೇನೆಯ ಅಭಿಪ್ರಾಯವಲ್ಲ,'' ಎಂದು ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News