ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಗರಿಷ್ಠ ದರ ನಿಗದಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Update: 2020-11-24 15:28 GMT

ಹೊಸದಿಲ್ಲಿ, ನ.24: ಕೋವಿಡ್-19 ಪತ್ತೆಹಚ್ಚಲು ನಡೆಸುವ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ದೇಶದಾದ್ಯಂತ ಏಕರೂಪದ ಗರಿಷ್ಠ ದರ ನಿಗದಿಗೊಳಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದೆ.

ಆರ್‌ಟಿ- ಪಿಸಿಆರ್ ಪರೀಕ್ಷೆಗೆ ಈಗ ವಿವಿಧ ರಾಜ್ಯ ಸರಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ದಿಲ್ಲಿ ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ 900 ರೂ.ನಿಂದ 2,800 ರೂ.ವರೆಗೆ ವಿಭಿನ್ನ ದರ ನಿಗದಿಗೊಳಿಸಿವೆ. ಇದರ ಬದಲು ದೇಶದಾದ್ಯಂತ ಏಕರೂಪದ ಗರಿಷ್ಠ ದರ 400 ರೂ. ಎಂದು ನಿಗದಿಗೊಳಿಸಲು ಸೂಚಿಸುವಂತೆ ಕೋರಿ ನ್ಯಾಯವಾದಿ ಅಜಯ್ ಅಗರ್‌ವಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ‘ಕೊರೋನ ಸೋಂಕು ಪರೀಕ್ಷೆಯ ಹೆಸರಿನಲ್ಲಿ ಪ್ರಯೋಗಾಲಯಗಳು ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿವೆ. ಪ್ರಯೋಗಾಲಯಗಳ ಲಾಭದ ಮಟ್ಟ ಆಂಧ್ರದಲ್ಲಿ ಶೇ. 1,400 ಆಗಿದ್ದರೆ ದಿಲ್ಲಿಯಲ್ಲಿ ಶೇ. 1,200 ಆಗಿದೆ ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆರ್‌ಟಿ-ಪಿಸಿಆರ್ ಕಿಟ್‌ಗಳು ಈಗ ಭಾರತದ ಮಾರುಕಟ್ಟೆಗಳಲ್ಲಿ 200 ರೂ.ಗಿಂತಲೂ ಕಡಿಮೆ ದರದಲ್ಲಿ ಲಭ್ಯವಿದೆ. ಈ ಕಿಟ್ ಬಳಸಿ ನಡೆಸುವ ಪರೀಕ್ಷೆಗೆ ಇತರ ವೆಚ್ಚವಾಗುವುದಿಲ್ಲ. 135 ಕೋಟಿ ಭಾರತೀಯರಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು ಕೊರೋನ ಸೋಂಕು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಆದ್ದರಿಂದ ಅರ್ಜಿಯನ್ನು ತ್ವರಿತ ವಿಚಾರಣೆಗೆ ಪರಿಗಣಿಸುವಂತೆ ಕೋರಲಾಗಿತ್ತು.

ವೀಡಿಯೊ ಕಾನ್ಫರೆನ್ಸ್ ಮೂಲಕ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.‌ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ, ಕೇಂದ್ರ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, 2 ವಾರದ ಬಳಿಕ ಮುಂದಿನ ವಿಚಾರಣೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News