ಮೋದಿ ಸರಕಾರದ ಹೊಸ ಎಫ್‍ಡಿಐ ನೀತಿಗೆ ಬಲಿಯಾಗಿ ಬಾಗಿಲು ಮುಚ್ಚಿದ 'ಹಫ್‍ಪೋಸ್ಟ್ ಇಂಡಿಯಾ'

Update: 2020-11-25 05:51 GMT

ನವದೆಹಲಿ: 'ಬಝ್ ಫೀಡ್' ಮತ್ತು 'ಹಫ್‍ಪೋಸ್ಟ್' ನಡುವೆ ಇತ್ತೀಚೆಗೆ ನಡೆದ ಒಪ್ಪಂದದ ನಂತರದ ಬೆಳವಣಿಗೆಯಲ್ಲಿ ಹಫ್ ಪೋಸ್ಟ್ ನ ಭಾರತೀಯ ಆವೃತ್ತಿಯಾಗಿರುವ ಆನ್‍ಲೈನ್ ಸುದ್ದಿ ಮತ್ತು ಲೈಫ್ ಸ್ಟೈಲ್ ವೆಬ್ ಸೈಟ್ HuffPost India ಬಾಗಿಲು ಹಾಕಿದೆ.

ಈ ಕುರಿತು ಹಫ್‍ಪೋಸ್ಟ್ ಇಂಡಿಯಾದ ಮುಖ್ಯ ಸಂಪಾದಕ ಅಮನ್ ಸೇಠಿ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. "ಇಂದು @huffpostIndiaದ ಕೊನೆಯ ದಿನ. ಇದು ನಾನು ಕೆಲಸ ಮಾಡಿದ ಅತ್ಯುತ್ತಮ ನ್ಯೂಸ್ ರೂಂ ಆಗಿದೆ (ಅದನ್ನು ಮುನ್ನಡೆಸುವ ಅವಕಾಶ ನನಗೆ ದೊರಕಿತ್ತು ಎಂದು ನನಗೆ ಈಗಲೂ ನಂಬಲು ಆಗುತ್ತಿಲ್ಲ)ನಮ್ಮ ಬರಹಗಳನ್ನು ಓದಿ ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

HuffPost India ವೆಬ್‍ಸೈಟ್‍ಗೆ ಭೇಟಿ ನೀಡಿದವರಿಗೆ "ನವೆಂಬರ್ 24ರಿಂದ ಹಫ್‍ಪೋಸ್ಟ್ ಇಂಡಿಯಾ ಯಾವುದೇ ಸುದ್ದಿ ಪ್ರಕಟಿಸುವುದಿಲ್ಲ,'' ಎಂಬ ಸಂದೇಶ ಕಾಣುತ್ತದೆ.

ಹಫ್‍ಪೋಸ್ಟ್ ಇಂಡಿಯಾ ಮುಚ್ಚಿದೆ ಎಂದು ತಿಳಿಯುತ್ತಲೇ ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.  ಈ ಕುರಿತಂತೆ ಟ್ವೀಟ್ ಮಾಡಿದ 'The Wire' ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್, "ಡಿಜಿಟಲ್ ಮಾಧ್ಯಮದಲ್ಲಿ ಎಫ್‍ಡಿಐ ಕುರಿತ ಮೋದಿ ಆದೇಶ ಮೊದಲ ತಲೆ ಪಡೆದಿದೆ.  @HuffPostIndia ಬಾಗಿಲು ಮುಚ್ಚಿದೆ. ಬಝ್‍ಫೀಡ್ ಸಂಸ್ಥೆ ಹಫ್‍ಪೋಸ್ಟ್ ಅನ್ನು ಖರೀದಿಸಿದಾಗ ಅದು ಬ್ರೆಝಿಲ್ ಮತ್ತು ಭಾರತವನ್ನು ಒಪ್ಪಂದದಿಂದ ಹೊರಗಿಟ್ಟಿತು. ಹೊಸ ಎಫ್‍ಡಿಐ ಮಿತಿ ಹಾಗೂ ನಿಯಂತ್ರಣಾ ವ್ಯವಸ್ಥೆಯ ಅನಿಶ್ಚಿತತೆಯಿಂದಾಗಿ ಭಾರತದಲ್ಲಿ ಉಳಿಯಲು ಆಸಕ್ತಿ ವಹಿಸಲಾಗಿಲ್ಲ. ಆತ್ಮನಿರ್ಭರ್ ನೀತಿಗೆ 12 ಉದ್ಯೋಗಗಳು ನಷ್ಟವಾಗಿವೆ,'' ಎಂದು  ಬರೆದಿದ್ದಾರೆ.

ಬಿಬಿಸಿ ವರದಿಯೊಂದರ ಪ್ರಕಾರ ವೆರಿಝಾನ್ ಮೀಡಿಯಾ ಸಂಸ್ಥೆಯು ಬಝ್‍ಫೀಡ್‍ನಲ್ಲಿ ಅಲ್ಪಸಂಖ್ಯಾತ ಪಾಲು ಬಂಡವಾಳದಾರನಾಗಲಿದೆ.

ಬಝ್‍ಫೀಡ್ ಚೀಫ್ ಎಕ್ಸಿಕ್ಯುಟಿವ್ ಜೋನಾಹ್ ಪೆರೆಟ್ಟಿ ಎರಡೂ ಉದ್ಯಮಗಳನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಹಫಿಂಗ್ಟನ್ ಪೋಸ್ಟ್ ಎಂದು ಕರೆಯಲ್ಪಡುತ್ತಿದ್ದ  ಹಫ್ ಪೋಸ್ಟ್ ಅನ್ನು ಅವರು 2005ರಲ್ಲಿ ಪ್ರಕಾಶಕ ಅರಿಯಾನ್ನ ಹಫಿಂಗ್ಟನ್ ಜತೆ ಆರಂಭಿಸಿ ನಂತರ ಒಂದು ವರ್ಷ ತರುವಾಯ ಬಝ್ ಫೀಡ್ ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News