ಖಾಯಂ ಆಯೋಗಕ್ಕೆ ಆಯ್ಕೆ ಇಲ್ಲ: ಅಸಮಾಧಾನ ವ್ಯಕ್ತಪಡಿಸಿದ ಮಹಿಳಾ ಸೇನಾಧಿಕಾರಿಗಳು

Update: 2020-11-25 16:45 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ.25: ಇತ್ತೀಚೆಗೆ ನಡೆದ ವಿಶೇಷ ಆಯ್ಕೆಯಲ್ಲಿ ಪರ್ಮನೆಂಟ್ ಕಮಿಷನ್(ದೀರ್ಘ ಸೇವಾವಧಿ)ಗೆ ಆಯ್ಕೆಯಾಗದ ಹಲವಾರು ಶಾರ್ಟ್ ಸರ್ವಿಸ್ ಕಮಿಷನ್ಡ್ (ಅಲ್ಪಾವಧಿ ಸೇವೆ) ಮಹಿಳಾ ಸೇನಾಧಿಕಾರಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆಯ್ಕೆ ಕುರಿತಾದ ಮಾನದಂಡದಲ್ಲಿ ಪಾರದರ್ಶಕತೆಯ ಕೊರತೆಯಿದೆ ಹಾಗೂ ಫಲಿತಾಂಶ ‘ಆಘಾತಕಾರಿ’ ಎಂದು ಅವರು ಹೇಳಿದ್ದಾರೆ.

ಆಯ್ಕೆ ಮಂಡಳಿಯ ಫಲಿತಾಂಶದ ಕುರಿತು ತಮ್ಮ ನಿರಾಸೆ ವ್ಯಕ್ತಪಡಿಸಿದ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಕನಿಷ್ಠ ನಾಲ್ಕು ಮಂದಿ ಮಹಿಳಾ ಅಧಿಕಾರಿಗಳು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.

‘‘ನಾವು ಅತ್ಯುತ್ತಮ ಸೇವೆಯನ್ನು ಎರಡು ದಶಕಗಳ ಕಾಲ ಸಲ್ಲಿಸಿದ್ದು, ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಅನ್ನು ಸೇನೆಯು ಸುಪ್ರೀಂಕೋರ್ಟ್ ಆದೇಶದಂತೆ ಜಾರಿಗೊಳಿಸುವುದನ್ನು ಎದುರು ನೋಡುತಿದ್ದೇವೆ. ಆದರೆ ನವೆಂಬರ್ 19ರಂದು ಬಂದ ಫಲಿತಾಂಶ ಆಘಾತಕಾರಿ. ಹಲವಾರು ಅರ್ಹ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ನೀಡಲಾಗಿಲ್ಲ’’ ಎಂದು ಮಹಿಳಾ ಅಧಿಕಾರಿಯೊಬ್ಬರು ದೂರಿದ್ದಾರೆ. ಯಾವ ಮಾನದಂಡದ ಆಧಾರದಲ್ಲಿ ಪರ್ಮನೆಂಟ್ ಕಮಿಷನ್‌ಗೆ ಆಯ್ಕೆ ಮಾಡಲಾಗುತ್ತದೆ ಎಂಬ ಕುರಿತು ಮಾಹಿತಿ ಕೋರಿ ತಾವು ಸಂಬಂಧಿತ ಅಧಿಕಾರಿಗಳಿಗೆ ಬರೆದ ಪತ್ರಕ್ಕೆ ಉತ್ತರ ದೊರಕಿಲ್ಲ ಎಂದೂ ಹಲವರು ಆರೋಪಿಸಿದ್ದಾರೆ.

ಎಷ್ಟು ಮಂದಿ ಮಹಿಳಾ ಅಧಿಕಾರಿಗಳನ್ನು ಪರ್ಮನೆಂಟ್ ಕಮಿಷನ್‌ಗೆ ನೇಮಕ ಮಾಡಲಾಗಿದೆಯೆಂಬ ಮಾಹಿತಿಯನ್ನೂ ಬಹಿರಂಗಗೊಳಿಸಲಾಗಿಲ್ಲ. ಈ ಸಂಖ್ಯೆ ಬಹಳ ಕಡಿಮೆಯಾಗಿದ್ದರೂ ಶೇ. 50ರಿಂದ ಶೇ. 70ರಷ್ಟು ಮಂದಿಗೆ ಪರ್ಮನೆಂಟ್ ಕಮಿಷನ್ ನೀಡಲಾಗಿದೆ ಎಂಬ ಅಭಿಪ್ರಾಯ ಮೂಡಿಸುವ ಯತ್ನ ನಡೆಯುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News