ಪ್ರಧಾನಿ ಮೋದಿಯದ್ದು ಎಂದು ವೈರಲ್ ಆಗುತ್ತಿರುವ ಯೋಗಾಭ್ಯಾಸದ ವೀಡಿಯೋ ಹಿಂದಿನ ಅಸಲಿಯತ್ತೇನು?

Update: 2020-11-25 11:33 GMT

ಹೊಸದಿಲ್ಲಿ: ವ್ಯಕ್ತಿಯೊಬ್ಬ ಯೋಗಾಭ್ಯಾಸ ನಡೆಸುತ್ತಿರುವ ಕಪ್ಪು ಬಿಳುಪಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆಯಲ್ಲದೆ ಇದು ಪ್ರಧಾನಿ ನರೇಂದ್ರ ಮೋದಿ ಯುವಕರಾಗಿದ್ದಾಗಿನ 'ಅಪರೂಪದ ವೀಡಿಯೋ' ಎಂದೂ ವೈರಲ್ ಆಗುತ್ತಿದೆ.

ಈ ಎಂಟು ನಿಮಿಷ ಅವಧಿಯ ವೀಡಿಯೋಗೆ ನೀಡಲಾದ ಕ್ಯಾಪ್ಶನ್‍ನಲ್ಲಿ "ಪ್ರಧಾನಿ ಮೋದಿಯ ಈ ಅಪರೂಪದ ವೀಡಿಯೋ ನೋಡಿ ನೀವು ಅಚ್ಚರಿ ಪಡುವಿರಿ. ಯೋಗ ಸಾಧನೆಯ ಅತ್ಯುನ್ನತ ಮಟ್ಟ,'' ಎಂದು ಬರೆಯಲಾಗಿದೆ.

ಬಿಜೆಪಿ ಯುವ ಘಟಕದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಮನೋಜ್ ಗೋಯೆಲ್ ಸಹಿತ ಹಲವರು ಈ ವೀಡಿಯೋ ಶೇರ್ ಮಾಡಿದ್ದಾರೆ. ಗೋಯೆಲ್ ಅವರಂತೂ ಮೋದಿ ಅವರನ್ನು 'ಯೋಗಋಷಿ' ಎಂದು ಬಣ್ಣಿಸಿದ್ದಾರೆ. ಅವರ ಪೋಸ್ಟ್ ಅನ್ನು 600ಕ್ಕೂ ಅಧಿಕ ಮಂದಿ  ಲೈಕ್ ಮಾಡಿದ್ದಾರೆ ಹಾಗೂ 7,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಗುಜರಾತ್ ರಾಜ್ಯದ ಸುರೇಂದ್ರನಗರದ ಬಿಜೆಪಿ ಶಾಸಕ ಧನ್ಜಿ ಪಟೇಲ್ ಕೂಡ ತಮ್ಮ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ್ದಾರೆ.

ವಾಸ್ತವವೇನು?: ವಾಸ್ತವವಾಗಿ ಈ ವೀಡಿಯೋದಲ್ಲಿ ಕಾಣಿಸಿರುವ ವ್ಯಕ್ತಿ ಪ್ರಧಾನಿ ಮೋದಿ ಅಲ್ಲ, ಬದಲು ಖ್ಯಾತ ಯೋಗ ಗುರು ಹಾಗೂ ಐಯ್ಯಂಗಾರ್ ಯೋಗಾ ಸ್ಥಾಪಕ ಬಿ ಕೆ ಎಸ್ ಐಯ್ಯಂಗಾರ್ ಆಗಿದ್ದಾರೆ. ಈ ವೀಡಿಯೋವನ್ನು 2006ರಲ್ಲಿ ಯುಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು ಅದನ್ನು 1938ರಲ್ಲಿ ಚಿತ್ರೀಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಲಂಡನ್ ಮೂಲದ ಐಯ್ಯಂಗಾರ್ ಯೋಗ ಇನ್‍ಸ್ಟಿಟ್ಯೂಟ್ ಮಾರಾಟ ಮಾಡಿದ "1938 ಪ್ರಾಕ್ಟೀಸ್'' ಎಂಬ ಡಿವಿಡಿಯಲ್ಲೂ  ಐಯ್ಯಂಗಾರ್ ಯುವಕರಾಗಿದ್ದಾಗ ಯೋಗಾಭ್ಯಾಸ ನಡೆಸುವ ಈ ವೀಡಿಯೋ ಇದೆ. ಮೂಲ ವೀಡಿಯೋದಲ್ಲಿ ಐಯ್ಯಂಗಾರ್ ಅವರ ಗುರು ತಿರುಮಲೈ ಕೃಷ್ಣಮಾಚಾರ್ಯ ಅವರೂ ಕಾಣಿಸುತ್ತಾರಾದರೂ ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಕೃಷ್ಣಮಾಚಾರ್ಯ ಅವರಿದ್ದ ಭಾಗವನ್ನು ತೆಗೆದು ಹಾಕಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News