ಮಲಯಾಳಂ ಚಿತ್ರ 'ಜಲ್ಲಿಕಟ್ಟು' ಆಸ್ಕರ್ಸ್ 2021ಗೆ ಭಾರತದ ಅಧಿಕೃತ ಎಂಟ್ರಿ

Update: 2020-11-25 16:29 GMT

ಹೊಸದಿಲ್ಲಿ,ನ.25: ಲಿಜೋ ಜೋಸ್ ಪೆಳ್ಳಿಶ್ಶೇರಿ ನಿರ್ದೇಶನದ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ವನ್ನು 93ನೇ ಆಸ್ಕರ್ ಪ್ರಶಸ್ತಿಗಳ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಬುಧವಾರ ಪ್ರಕಟಿಸಿದೆ.

ಹಿಂದಿ, ಮರಾಠಿ, ಮಲಯಾಳಂ ಮತ್ತು ಇತರ ಭಾಷೆಗಳ 27 ಚಿತ್ರಗಳು ಪೈಪೋಟಿಯಲ್ಲಿದ್ದು, ಸರ್ವಾನುಮತದಿಂದ ಆಯ್ಕೆಯಾಗಿರುವ ‘ಜಲ್ಲಿಕಟ್ಟು’ ತಮ್ಮ ಗ್ರಾಮದಲ್ಲಿ ಹುಚ್ಚೆದ್ದು ತಿರುಗುತ್ತಿದ್ದ ಗೂಳಿಯೊಂದನ್ನು ನಿಲ್ಲಿಸಲು ಆ ಗ್ರಾಮದ ಬುಡಕಟ್ಟು ಜನರ ಪ್ರಯತ್ನದ ಕುರಿತ ಚಿತ್ರವಾಗಿದೆ.

ಮಾನವರು ಪ್ರಾಣಿಗಳಿಗಿಂತಲೂ ಕೆಟ್ಟವರು ಎನ್ನುವುದನ್ನು ಬಿಂಬಿಸುವ ಮೂಲಕ ನಿಜಕ್ಕೂ ಈ ಚಿತ್ರವು ಮನುಷ್ಯರಲ್ಲಿಯ ಹಸಿ ಸಮಸ್ಯೆಗಳನ್ನು ಬಯಲಿಗೆಳೆದಿದೆ ಎಂದು ಎಫ್‌ಎಫ್‌ಐ ಆಯ್ಕೆ ಸಮಿತಿಯ ಅಧ್ಯಕ್ಷರಾದ ನಿರ್ಮಾಪಕ ರಾಹುಲ್ ರವೇಲ್ ಅವರು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹರೀಶ್ ಅವರ ಸಣ್ಣಕಥೆಯನ್ನು ಆಧರಿಸಿ ನಿರ್ಮಾಣಗೊಂಡಿರುವ ‘ಜಲ್ಲಿಕಟ್ಟು’ ಚಿತ್ರದಲ್ಲಿ ಆ್ಯಂಟನಿ ವರ್ಗೀಸ್, ಚೆಂಬನ್ ವಿನೋದ್ ಜೋಸ್, ಸಾಬುಮನ್ ಅಬ್ದುಸಮದ್ ಮತ್ತು ಸಂಥಿ ಬಾಲಚಂದ್ರನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಿರೀಶ ಗಂಗಾಧರನ್ ಸಿನಿಮಾಟೋಗ್ರಾಫಿ ಮತ್ತು ರಂಗನಾಥ್ ರವಿ ಅವರು ಧ್ವನಿಗ್ರಹಣವನ್ನು ನಿರ್ವಹಿಸಿದ್ದಾರೆ. ಪೆಳ್ಳಿಶ್ಶೇರಿ ‘ಅಂಗಮಾಲಿ ಡೈರಿಸ್’ ಮತ್ತು ‘ಇ ಮಾ ಯೌ’ನಂತಹ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ಕಳೆದ ವರ್ಷ 50ನೇ ಭಾರತೀಯ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದರು.

2019ರ ಸೆಪ್ಟಂಬರ್‌ನಲ್ಲಿ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿದ್ದ ‘ಜಲ್ಲಿಕಟ್ಟು ’ವಿಮರ್ಶಕರ ವ್ಯಾಪಕ ಪ್ರಶಂಸೆಗೊಳಗಾಗಿತ್ತು.

ಛಪಾಕ್, ಛಲಾಂಗ್, ಶಕುಂತಲಾ ದೇವಿ, ಗುಲಾಬೊ ಸಿತಾಬೊ, ದಿ ಸ್ಕೈ ಈಸ್ ಪಿಂಕ್, ಬುಲ್‌ಬುಲ್ ಮತ್ತು ದಿ ಡಿಸಿಪಲ್ ಸೇರಿದಂತೆ ಒಟ್ಟು 27 ಚಿತ್ರಗಳು ಆಸ್ಕರ್ ಪ್ರವೇಶಕ್ಕೆ ಸ್ಪರ್ಧೆಯಲ್ಲಿದ್ದವು. ಕಳೆದ ವರ್ಷ ರೆಯಾ ಅಖ್ತರ್ ಅವರ, ರಣವೀರ ಸಿಂಗ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದ ‘ಗಲ್ಲಿ ಬಾಯ್’ ಚಿತ್ರವು ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News